ಖಾತೆ ಹಂಚಿಕೆಗೆ ಮೂಡಿದ ಸಹಮತ: ಗೃಹ ಖಾತೆ ಯಾರಿಗೆ ಗೊತ್ತಾ ?

ಹೊಸದಿಲ್ಲಿ, ಮೇ 31: ಕಳೆದ ಕೆಲ ದಿನಗಳಿಂದ ಕಗ್ಗಂಟಾಗಿದ್ದ ಕರ್ನಾಟಕದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಸಚಿವ ಸಂಪುಟ ರಚನೆಯ ಪ್ರಕ್ರಿಯೆ ಸುಸೂತ್ರವಾಗಿ ಸಾಗುವ ನಿರೀಕ್ಷೆ ಮೂಡಿದ್ದು, ಪ್ರಮುಖ ಖಾತೆಗಳ ಬಗ್ಗೆ ಉಭಯ ಪಕ್ಷಗಳ ಮಧ್ಯೆ ಸಹಮತ ಮೂಡಿದೆ ಎಂದು ವರದಿಯಾಗಿದೆ. ಇದರಂತೆ ಜೆಡಿಎಸ್ ವಿತ್ತ ಖಾತೆಯನ್ನು ಪಡೆದರೆ ಕಾಂಗ್ರೆಸ್ ಗೃಹ ಖಾತೆಯನ್ನು ಹೊಂದಲಿದೆ ಎಂದು ಮೂಲಗಳು ತಿಳಿಸಿವೆ.
ಎರಡೂ ಪಕ್ಷಗಳ ಮುಖಂಡರ ಮಧ್ಯೆ ಬುಧವಾರದಿಂದ ನಡೆದ ಐದು ಸುತ್ತಿನ ಮಾತುಕತೆಯ ಬಳಿಕ ಖಾತೆಗಳ ಹಂಚಿಕೆ ಬಗ್ಗೆ ಸಹಮತ ಮೂಡಿದೆ. ಇದೀಗ ಅಮೆರಿಕದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಫೋನ್ ಮೂಲಕ ಸಭೆಯಲ್ಲಿದ್ದ ಮುಖಂಡರನ್ನು ಸಂಪರ್ಕಿಸಿ ಮಾತನಾಡಿದ್ದಾರೆ. ಮಿತ್ರ ಪಕ್ಷಗಳ ಮಧ್ಯೆ ಖಾತೆ ಹಂಚಿಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಯಾವಾಗ ಮಾಡಬೇಕೆಂಬುದು ಪಕ್ಷಗಳ ನಾಯಕರ ನಿರ್ಧಾರವನ್ನು ಅವಲಂಬಿಸಿದೆ . ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹಾಗೂ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಬೆಂಗಳೂರಿಗೆ ತೆರಳಿ ತಮ್ಮ ಪಕ್ಷದ ರಾಜ್ಯ ಮುಖಂಡರೊಂದಿಗೆ ಚರ್ಚಿಸಿ ಖಾತೆ ಹಂಚಿಕೆ ವ್ಯವಸ್ಥೆಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡ್ಯಾನಿಷ್ ಅಲಿ, ವೇಣುಗೋಪಾಲ್, ಅಹ್ಮದ್ ಪಟೇಲ್, ಅಶೋಕ್ ಗೆಹ್ಲೋಟ್ ಸೇರಿದಂತೆ ಎರಡೂ ಪಕ್ಷದ ಮುಖಂಡರು ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಝಾದ್ ನಿವಾಸದಲ್ಲಿ ಸಭೆ ಸೇರಿ ಚರ್ಚೆ ನಡೆಸಿದರು ಎಂದು ವರದಿಯಾಗಿದೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಜೆಡಿಎಸ್ ಮುಖಂಡ
ಎಚ್.ಡಿ.ಕುಮಾರಸ್ವಾಮಿ ಮೇ 23ರಂದು ಪ್ರಮಾಣವಚನ ಸ್ವೀಕರಿಸಿದ್ದರೂ ಖಾತೆ ಹಂಚಿಕೆ ಬಗ್ಗೆ ಎರಡೂ ಪಕ್ಷಗಳ ಮಧ್ಯೆ ಹಗ್ಗಜಗ್ಗಾಟ ಮುಂದುವರಿದಿತ್ತು.





