ದಕ, ಉಡುಪಿ ಜಿಲ್ಲೆಗೆ 50 ಕೋಟಿ ರೂ. ಅನುದಾನಕ್ಕೆ ಐವನ್ ಡಿಸೋಜಾ ಮನವಿ
ಪ್ರಕೃತಿ ವಿಕೋಪದಿಂದ ಉಂಟಾದ ಹಾನಿ

ಮಂಗಳೂರು, ಮೇ 31: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಕೃತಿ ವಿಕೋಪದಿಂದ ಉಂಟಾದ ಹಾನಿಗೆ ಕನಿಷ್ಠ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜಾ ಮನವಿ ಮಾಡಿದ್ದಾರೆ.
ದ.ಕ. ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ವಿಪರೀತ ಮಳೆಯಿಂದ ಉಂಟಾದ ಪ್ರಾಣ ಹಾನಿ ಪ್ರಾಣಿಗಳ ಹಾನಿ ರಸ್ತೆ ತಡೆಗೋಡೆಗಳು ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗಳ ನಷ್ಟಗಳು ಸುಮಾರು 20 ಕೋಟಿ ಎಂದು ಜಿಲ್ಲಾಡಳಿತ ಅಂದಾಜಿಸಿದ್ದರೂ, ಮುಂದೆ ಆಗಬಹುದಾದ ಅನಾಹುತ ಮತ್ತು ಹಾನಿಗೊಂಡ ಮನೆಗಳಿಗೆ ಖರ್ಚು ಆಗುವುದನ್ನು ಮಾರುಕಟ್ಟೆ ದರದಲ್ಲಿಯೇ ಪರಿಹಾರವನ್ನು ನೀಡಬೇಕೆಂದು ಐವನ್ ಡಿಸೋಜಾ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮುನ್ನೆಚ್ಚರಿಕೆಯನ್ನು ರಾಜ್ಯ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದ್ದು, ಒತ್ತುವರಿಯನ್ನು ತನಿಖೆ ನಡೆಸಿ, ಚರಂಡಿ ಮತ್ತು ಮಳೆ ನೀರು ಹರಿಯುವಂತೆ ಸಾಕಷ್ಟು ಕ್ರಮ ಕೈಗೊಳ್ಳುವಂತೆ ಮನವಿಯನ್ನು ಮಾಡಿದರು.ಎನ್‌ಡಿಆರ್‌ಎಸ್ ನಿರ್ದೇಶನದಂತೆ ನೀಡಿದ ಪರಿಹಾರ ತೀವ್ರ ಕಡಿಮೆಯಾಗಿದ್ದು, ಪ್ರಸ್ತುತ ಮಾರುಕಟ್ಟೆ ದರದಂತೆ ಪರಿಹಾರ ಒದಗಿಸುವಂತೆ ಮತ್ತು ಅತಿಯಾದ ಮಳೆಯಿಂದ ಉಂಟಾಗಬಹುದಾದ ಸಾಂಕ್ರಾಮಿಕ ರೋಗವನ್ನು ತಡೆಕಟ್ಟಲು ರಕ್ತ ಪರಿಕ್ಷಾ ಕೇಂದ್ರವನ್ನೂ, ನುರಿತ ವೈದ್ಯ ತಂಡವನ್ನು ನೇಮಿಸಬೇಕೆಂದು ಮುಖ್ಯಮಂತ್ರಿಗಳು ಕೂಡಲೇ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು ಎಂದು ಐವನ್ ಡಿಸೋಜಾ ತಿಳಿಸಿದ್ದಾರೆ.







