ತಂಬಾಕು ಮುಕ್ತ ಸಮಾಜ ನಿರ್ಮಾಣ ಅಭಿಯಾನ ಪ್ರತಿ ಮನೆಯಲ್ಲಿ ನಡೆಯಬೇಕು-ಜಯಂತಿ ಬಲ್ನಾಡು
ವಿಶ್ವ ತಂಬಾಕು ವಿರೋಧಿ ದಿನ

ಪುತ್ತೂರು, ಮೇ 31: ಬದುಕಿಗೆ ಕಂಟಕವಾಗಿರುವ ತಂಬಾಕು ಮುಕ್ತ ಸಮಾಜ ನಿರ್ಮಾಣದ ಅಭಿಯಾನ ಪ್ರತೀ ಮನೆಯಲ್ಲೂ ನಡೆಯಬೇಕು. ಮಹಿಳೆಯರು ಈ ನಿಟ್ಟಿನಲ್ಲಿ ಸರಿಯಾದ ಗಮನ ಹರಿಸಿದರೆ ಆರೋಗ್ಯಕರ ಕುಟುಂಬ ನಿರ್ಮಿಸಲು ಸಾಧ್ಯ ಎಂದು ಪುತ್ತೂರು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಗುರುವಾರ ಇಲ್ಲಿನ ಗ್ರಾಮಾಭಿವೃದ್ಧಿ ಯೋಜನೆಯ ಸಭಾಂಗಣದಲ್ಲಿ ನಡೆದ ವಿಶ್ವ ತಂಬಾಕು ವಿರೋಧಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಂಬಾಕು ಸೇವನೆಯಿಂದ ಉಂಟಾಗುತ್ತಿರುವ ಅಪಾಯಗಳ ಅರಿವು ಬಹುತೇಕ ಜನರಿಗಿದೆ. ಆದರೂ ಈ ಚಟದಿಂದ ಹೊರಬರಲು ಸಾಧ್ಯವಾಗದೆ ಬಳಲುತ್ತಿದ್ದಾರೆ. ಇದನ್ನು ತಡೆಯಲು ಬಲವಾದ ಜಾಗೃತಿ, ಮನವರಿಕೆ ನಡೆಯಬೇಕು. ಇದನ್ನು ಮನೆಯ ಕೌಟುಂಬಿಕ ಪರಿಸರದಲ್ಲೇ ನಡೆಸಿದರೆ ಉತ್ತಮ ಫಲಿತಾಂಶ ಬೀರಬಹುದು. ವಿಶೇಷವಾಗಿ ಮಹಿಳೆಯರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದರು.
ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜನಾರ್ದನ ಎಸ್. ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯು ಜನರಲ್ಲಿ ಆರ್ಥಿಕ ಮತ್ತು ಸಾಮಾಜಿಕ ಶಿಸ್ತು ಮೂಡಿಸುವ ಕೆಲಸ ಮಾಡುತ್ತಾ ಬಂದಿದೆ. ಇದೊಂದು ಸಮಾಜದಲ್ಲಿ ಧನಾತ್ಮಕ ಪರಿವರ್ತನೆಯಾಗಿದೆ. ಮದ್ಯವರ್ಜನ ಶಿಬಿರಗಳಿಂದಾಗಿ ಸಾವಿರಾರು ಜನ ಚಟಮುಕ್ತರಾಗಿದ್ದು, ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲ ಕುಟುಂಬಗಳೂ ಆಂದೋಲನ ನಡೆಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪುತ್ತೂರು ಘಟಕದ ಅಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರದ ನಾನಾ ಘಟಕಗಳು ಹಲವು ದಶಕಗಳಿಂದ ಕೆಲಸ ಮಾಡುತ್ತಾ ಬಂದಿವೆ. ಇದರಿಂದ ಸುಂದರ ಸಮಾಜ ನಿರ್ಮಾಣದಲ್ಲಿ ಹೊಸ ಆಶಾವಾದ ಮೊಳೆತಿದೆ ಎಂದರು.
ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ತಂಬಾಕು ಸೇವನೆಯ ಅಪಾಯಗಳ ಕುರಿತು ಅರಿವು ಮೂಡಿಸಿದರು. ಜನಜಾಗೃತಿ ವೇದಿಕೆ ಪುತ್ತೂರು ವಲಯ ಅಧ್ಯಕ್ಷ ಪ್ರಶಾಂತ್ ಮುರ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವಲಯಾಧ್ಯಕ್ಷೆ ಸ್ವರ್ಣಲತಾ ಹೆಗ್ಡೆ ಉಪಸ್ಥಿತರಿದ್ದರು.
ಯೋಜನೆಯ ಮೇಲ್ವಿಚಾರಕಿ ಪಾವಜಾ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಆಶಾ ವಂದಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುಜಾತ ಕಾರ್ಯಕ್ರಮ ನಿರ್ವಹಿಸಿದರು.







