ನಿಪಾಹ್ ವೈರಸ್‌ಗೆ ಮತ್ತಿಬ್ಬರು ಬಲಿ

ತಿರುವನಂತಪುರ, ಮೇ 31: ನಿಪಾಹ್ ವೈರಸ್ ಸೋಂಕಿಗೆ ಕೇರಳದಲ್ಲಿ ಮತ್ತಿಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ನಿಪಾಹ್ ವೈರಸ್ ಸೋಂಕಿಗೆ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧುಸೂಧನ (56) ಹಾಗೂ ಅಖಿಲ್ ಕಾರಶ್ಶೇರಿ (28) ಬುಧವಾರ ರಾತ್ರಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಮೃತಪಟ್ಟಿದ್ದಾರೆ. ಇನ್ನೋರ್ವ ವ್ಯಕ್ತಿ ಸೋಂಕಿಗೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆರಂಭದಲ್ಲಿ ಇಬ್ಬರೂ ಗುಣಮುಖರಾಗುವ ಲಕ್ಷಣ ಕಂಡು ಬಂದಿತ್ತು. ಆದರೆ, ಅನಂತರ ಅವರ ಸ್ಥಿತಿ ಹದಗೆಡುತ್ತಾ ಬಂತು. ಅವರಿಬ್ಬರು ಆಸ್ಪತ್ರೆಯಲ್ಲಿ ನಿಪಾಹ್ ವೈರಸ್ ಸೋಂಕಿಗೆ ಒಳಗಾಗಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಇನ್ನೋರ್ವ ವ್ಯಕ್ತಿಯನ್ನು ನಿಪಾಹ್ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಇದರಿಂದ ವೈರಸ್ ಸೋಂಕು ಹರಡುವ ಬಗ್ಗೆ ಮತ್ತೆ ಆತಂಕ ಉಂಟಾಗಿದೆ. ಪ್ರಸ್ತುತ ಮೂವರು ಸೋಂಕಿತರು ಹಾಗೂ 9 ಮಂದಿ ವೈರಸ್ ಸೋಂಕಿನ ಲಕ್ಷಣದೊಂದಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಶಂಕಿತ ನಿಪಾಹ್ ವೈರಸ್‌ನಿಂದ ಕೋಲ್ಕತ್ತಾದಲ್ಲಿ ಮೃತಪಟ್ಟ ಯೋಧನ ಬಗ್ಗೆ ಇದುವರೆಗೆ ಯಾವುದೇ ಮಾಹಿತಿಯನ್ನು ರಾಜ್ಯ ಪಡೆದಿಲ್ಲ ಎಂದು ರಾಜ್ಯ ಆರೋಗ್ಯ ನಿರ್ದೇಶಕ ಡಾ. ಆರ್.ಎಲ್. ಸರಿತಾ ಹೇಳಿದ್ದಾರೆ. ಮೇ 13ರಂದು ಕರ್ತವ್ಯಕ್ಕೆ ಹಾಜರಾಗುವ ಮೊದಲು ಯೋಧ ಶೀನು ಪ್ರಸಾದ್ (28) ಒಂದು ತಿಂಗಳು ರಜೆಯ ಹಿನ್ನೆಲೆಯಲ್ಲಿ ಕೇರಳದಲ್ಲಿ ಇದ್ದರು ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ. ಅವರ ಮೃತದೇಹವನ್ನು ಕೋಲ್ಕತ್ತಾದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ದೇಹ ದ್ರವಗಳನ್ನು ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಿ ಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.







