ಅಮ್ಮನ ಆದರ್ಶಗಳಲ್ಲಿ ಮುನ್ನಡೆಯುದೊಂದೇ ದಾರಿ: ನಟ ಶಿವರಾಜ್ ಕುಮಾರ್
ದೊಡ್ಮನೆ ಅಮ್ಮ ಕೃತಿ ಬಿಡುಗಡೆ ಕಾರ್ಯಕ್ರಮ

ಬೆಂಗಳೂರು, ಮೇ 31: ನಮ್ಮ ಬದುಕಿನಲ್ಲಿ ನನ್ನಮ್ಮನ(ಪಾರ್ವತಮ್ಮ ರಾಜ್‌ಕುಮಾರ್) ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುವುದೊಂದೆ ದಾರಿಯೆಂದು ನಟ ಶಿವರಾಜ್‌ಕುಮಾರ್ ಅಭಿಪ್ರಾಯಿಸಿದರು.
ಗುರುವಾರ ಅನ್ನಪೂರ್ಣ ಪ್ರಕಾಶನ ನಗರದ ಕಂಠೀರವ ಸ್ಟುಡಿಯೋದಲ್ಲಿ ಆಯೋಜಿಸಿದ್ದ ‘ದೊಡ್ಮನೆ ಅಮ್ಮ’ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಮ್ಮನ ಜೀವನ ವಿಧಾನವೇ ನಮ್ಮ ಕುಟುಂಬಕ್ಕೆ ದಾರಿದೀಪವೆಂದು ಭಾವುಕರಾದರು.
ತಾಯಿಗಿಂತ ಬೇರೆ ದೇವರಿಲ್ಲ. ಬಾಲ್ಯದಿಂದ ಮೊದಲುಗೊಂಡು ಸಮಾಜದಲ್ಲಿ ನಮ್ಮನ್ನು ಗೌರವಯುತವಾಗಿ ಬದುಕುವ ರೀತಿಯಲ್ಲಿ ತಿದ್ದಿ ತೀಡಿದ ಅಮ್ಮ(ಪಾರ್ವತಮ್ಮ ರಾಜ್‌ಕುಮಾರ್) ನಮಗೆ ದೇವರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಬೆಳೆದು ಬಂದಿದ್ದೇವೆ. ಮುಂದೆಯೂ ಅದೇ ಮಾರ್ಗದಲ್ಲಿ ಮುನ್ನಡೆಯುತ್ತೇವೆಂದು ರಾಘವೇಂದ್ರ ರಾಜ್‌ಕುಮಾರ್ ಅಭಿಪ್ರಾಯಿಸಿದರು.
ಅಮ್ಮ(ಪಾರ್ವತಮ್ಮ ರಾಜ್‌ಕುಮಾರ್) ನನಗೆ ಎಲ್ಲವೂ ಆಗಿತ್ತು. ನನ್ನ ಬದುಕಿನ ಪ್ರತಿಯೊಂದು ಘಟನೆಗಳನ್ನು ಅಮ್ಮನೊಂದಿಗೆ ಹಂಚಿಕೊಂಡು, ಸಲಹೆ ಪಡೆಯುತ್ತಿದ್ದೆ. ಅಮ್ಮನೊಂದಿಗೆ ಕಳೆದ ಆ ನೆನಪುಗಳ ಸ್ಫೂರ್ತಿಯೊಂದಿಗೆ ಮುಂದಿನ ಜೀವನವನ್ನು ಕಳೆಯುತ್ತೇನೆಂದು ನಟ ಪುನಿತ್‌ರಾಜ್‌ಕುಮಾರ್ ತಿಳಿಸಿದರು.
ಪಾರ್ವತಮ್ಮ ರಾಜ್‌ಕುಮಾರ್‌ರವರ ಬಾಲ್ಯದ ಬದುಕು. ಅವರು ಚಿತ್ರರಂಗದಲ್ಲಿ ಬೆಳೆದು ಬಂದ ಹಾದಿಯನ್ನು ಲೇಖಕ ಸಿರಿಗೇರಿ ಯರಿಸ್ವಾಮಿ ‘ದೊಡ್ಮನೆ ಅಮ್ಮ’ ಕೃತಿ ಸಂಪಾದನೆಯಲ್ಲಿ ವಿವರವಾಗಿ ದಾಖಲಿಸಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್‌ಕುಮಾರ್ ಕುಟಂಬದ ಸದಸ್ಯರು ಹಾಗೂ ನೂರಾರು ಅಭಿಮಾನಿಗಳು ಭಾಗವಹಿಸಿದ್ದರು.







