ಜೂ.5ರಂದು ನಿರ್ಮಾಪಕ, ವಿತರಕರ ಸಭೆ: ಸಾ.ರಾ.ಗೋವಿಂದು
ರಜನಿಕಾಂತ್ ಅಭಿನಯದ ‘ಕಾಲ’ ಸಿನೆಮಾ ತಡೆ ಸಂಬಂಧ
ಬೆಂಗಳೂರು, ಮೇ 31: ಕಾವೇರಿ ವಿಷಯ ಕುರಿತು ವ್ಯತಿರಿಕ್ತ ಹೇಳಿಕೆ ನೀಡಿರುವ ನಟ ರಜನಿಕಾಂತ್ ಅಭಿನಯದ ‘ಕಾಲ’ ಚಿತ್ರವನ್ನು ರಾಜ್ಯದಲ್ಲಿ ಬಿಡಗಡೆ ಮಾಡದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಂದಿನ ಮಂಗಳವಾರ ನಿರ್ಮಾಪಕರು ಹಾಗೂ ವಿತರಕರ ಸಭೆ ಕರೆಯಲಾಗಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟ ರಜನಿಕಾಂತ್ ಅಭಿನಯದ ‘ಕಾಲ’ ಸಿನೆಮಾ ತಡೆಗೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿವೊಂದೇ ತೀರ್ಮಾನ ಕೈಗೊಳ್ಳಲಾಗುವುದಿಲ್ಲ. ಈ ನಿಟ್ಟಿನಲ್ಲಿ ನಿರ್ಮಾಪಕ ಹಾಗೂ ವಿತರಕರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕನ್ನಡಪರ ಸಂಘಟನೆಗಳು ‘ಕಾಲ’ ಸಿನೆಮಾವನ್ನು ರಾಜ್ಯದಲ್ಲಿ ಯಾವುದೆ ಕಾರಣಕ್ಕೂ ಬಿಡುಗಡೆಗೆ ಅವಕಾಶ ನೀಡುವುದಿಲ್ಲವೆಂದು ಖಚಿತ ಪಡಿಸಿವೆ. ಈ ಹಿನ್ನೆಲೆಯಲ್ಲಿ ನಾಡು-ನುಡಿಗಾಗಿ ಶ್ರಮಿಸುತ್ತಿರುವ ಕನ್ನಡಪರ ಸಂಘಟನೆಗಳ ವಿರುದ್ಧವಾಗಿ ಚಲನಚಿತ್ರ ವಾಣಿಜ್ಯ ಮಂಡಳಿ, ಕಲಾವಿದರು, ನಿರ್ಮಾಪಕರು, ವಿತರಕರು ಹೋಗುವುದಿಲ್ಲ. ಹೀಗಾಗಿ ಕಾಲ ಸಿನೆಮಾ ರಾಜ್ಯದಲ್ಲಿ ಬಿಡುಗಡೆಯಾಗುವುದು ಬಹುತೇಕ ಅನುಮಾನವೆಂದು ಅವರು ಅಭಿಪ್ರಾಯಿಸಿದರು.





