ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಆಪ್ತರ ನಿವಾಸ, ಕಚೇರಿ ಮೇಲೆ ಸಿಬಿಐ ದಾಳಿ

ಬೆಂಗಳೂರು, ಮೇ31: ಅಮಾನ್ಯಗೊಂಡ ನೋಟುಗಳನ್ನು ಅಕ್ರಮವಾಗಿ ಬದಲಾಯಿಸಲಾಗುತ್ತಿದೆ ಎಂಬ ಆರೋಪದಲ್ಲಿ ಸಿಬಿಐ ಅಧಿಕಾರಿಗಳು ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಅವರ ಜೊತೆ ಸಂಪರ್ಕ ಹೊಂದಿರುವವರ ನಿವಾಸ ಹಾಗೂ ಕಚೇರಿಯ ಮೇಲೆ ಗುರುವಾರ ಮುಂಜಾನೆ ದಾಳಿ ನಡೆಸಿದ್ದಾರೆ.
ಶಾಸಕ ಶಿವಕುಮಾರ್ ಹಾಗೂ ಅವರ ಸಹೋದರ ಸಂಸದ ಡಿ.ಕೆ ಸುರೇಶ್, ಇದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಪ್ರತೀಕಾರದ ರಾಜಕೀಯ ನಡೆಯಾಗಿದೆ ಎಂದು ಆರೋಪಿಸಿದ್ದಾರೆ. 2016ರ ನವೆಂಬರ್ 14ರಂದು ರಾಮನಗರದಲ್ಲಿರುವ ಕಾರ್ಪೊರೇಶನ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಬಿ.ಪ್ರಕಾಶ್ ಇತರ ಅಪರಿಚಿತರ ಸಹಮತದೊಂದಿಗೆ ಹತ್ತು ಲಕ್ಷ ರೂ. ಅಮಾನ್ಯಗೊಂಡ ನೋಟುಗಳನ್ನು ಹೊಸ ನೋಟುಗಳೊಂದಿಗೆ ಬದಲಾಯಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿತ ರಶೀದಿಗಳನ್ನು ತಿರುಚಿದ್ದಾರೆ ಎಂಬ ಆರೋಪ ಕೂಡಾ ಪ್ರಕಾಶ್ ಹಾಗೂ ಇತರ ಮೇಲಿದೆ.
ಸಿಬಿಐ ಅಧಿಕಾರಿಗಳು ಬೆಂಗಳೂರು, ಕನಕಪುರ ಮತ್ತು ರಾಮನಗರದಲ್ಲಿ ಐದು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಕನಕಪುರದ ಚುನಾವಣಾ ಕೇಂದ್ರ, ರಾಮನಗರದ ಕಚೇರಿ ಹಾಗೂ ಚುನಾವಣಾ ಕೇಂದ್ರ ಉಸ್ತುವಾರಿ ಶಿವನಂದ, ಕ್ಲಾರ್ಕ್ ನಂಜಪ್ಪ ಮತ್ತು ಪದ್ಮನಾಭಯ್ಯ ಎಂಬವರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಪದ್ಮನಾಭಯ್ಯ ಹಳೆ ನೋಟುಗಳನ್ನು ಬ್ಯಾಂಕ್‌ನಲ್ಲಿ ಬದಲಾಯಿಸಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. ಪ್ರಕಾಶ್ ಹಾಗೂ ಕಾರ್ಪೊರೇಶನ್ ಬ್ಯಾಂಕ್‌ನ ಇತರ ಅಧಿಕಾರಿಗಳು ಮತ್ತು ಇತರರ ವಿರುದ್ಧ 2017ರ ಎಪ್ರಿಲ್ 7ರಂದು ದೂರು ದಾಖಲಿಸಲಾಗಿತ್ತು.
ಸಿಬಿಐ ವಿಶೇಷ ನ್ಯಾಯಾಲಯವು ತಾನೂ ಸೇರಿ ಹನ್ನೊಂದು ಜನರ ವಿರುದ್ಧ ಸರ್ಚ್ ವಾರಂಟ್ ಹೊರಡಿಸಿತ್ತು. ಆದರೆ ತಾನು ಇದನ್ನು ನಿರ್ಲಕ್ಷಿಸಿದ್ದೆ ಎಂದು ತಿಳಿಸಿರುವ ಸುರೇಶ್, ಕೇಂದ್ರ ಸರಕಾರವು ತನ್ನ ಮತ್ತು ಸಹೋದರ ಶಿವಕುಮಾರ್‌ರನ್ನು ಗುರಿ ಮಾಡುತ್ತಿದೆ ಎಂದು ಆರೋಪಿಸಿದೆ.
“ಇಲ್ಲಿ ಮುಖ್ಯ ಗುರಿಯಾಗಿರುವುದು ನಾನು ಮತ್ತು ನನ್ನ ಸಹೋದರ, ಬೇರೆ ಯಾರೂ ಅಲ್ಲ. ಇತರರನ್ನು ಗುರಿ ಮಾಡುವ ಮೂಲಕ ಅವರು ನಮ್ಮನ್ನು ತಲುಪಲು ನೋಡುತ್ತಿದ್ದಾರೆ. ನನಗೆ ಈ ಹನ್ನೊಂದು ಜನರು ಯಾರೆಂದು ಗೊತ್ತಿಲ್ಲ. ಪ್ರತೀಕಾರದ ಯಾವುದೇ ನಡೆಯ ವಿರುದ್ಧ ಕಾನೂನು ಸಮರಕ್ಕೆ ನಾನು ಸಿದ್ಧ” ಎಂದು ಡಿ.ಕೆ ಸುರೇಶ್ ತಿಳಿಸಿದ್ದಾರೆ. ಕರ್ನಾಟಕ ಚುನಾವಣೆಯ ನಂತರ ಬಿಜೆಪಿ ತಮ್ಮ ಪಕ್ಷದ ಶಾಸಕರನ್ನು ಸೆಳೆಯುವುದನ್ನು ತಪ್ಪಿಸಲು ಅವರೆಲ್ಲರನ್ನು ರೆಸಾರ್ಟ್‌ನಲ್ಲಿ ಇಡುವಲ್ಲಿ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು.
ಈ ಸ್ಥಿತಿಯು ಶಾಶ್ವತವಲ್ಲ ಮತ್ತು ಯಾರೂ ಅಮರರಲ್ಲ ಎಂಬುದನ್ನು ಬಿಜೆಪಿ ಅಧೀನದಲ್ಲಿರುವ ಅಧಿಕಾರಿಗಳು ತಿಳಿದುಕೊಳ್ಳಬೇಕು. ಯಾರೂ ಶಾಶ್ವತವಾಗಿ ಅಧಿಕಾರದಲ್ಲಿರುವುದಿಲ್ಲ, ನಿಮ್ಮ ಅಧಿಕಾರ ಕೂಡಾ ಶಾಶ್ವತವಲ್ಲ. ನಿಮಗೆ ಸ್ವಲ್ಪ ಸಮಯಕ್ಕಷ್ಟೇ ಅಧಿಕಾರ ನೀಡಲಾಗಿದೆ. ಹಾಗಾಗಿ ಕೆಲವರ ಕೈಗೊಂಬೆಯಂತೆ ವರ್ತಿಸಿ ಇತರರಿಗೆ ತೊಂದರೆ ನೀಡಬೇಡಿ ಎಂದು ಶಿವಕುಮಾರ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದಾರೆ.
“ಬಿಜೆಪಿ, ಅಮಿತ್ ಶಾ ಮತ್ತು ನರೇಂದ್ರ ಮೋದಿ ನಮ್ಮನ್ನು ಗುರಿ ಮಾಡುತ್ತಿದ್ದಾರೆ. ಅವರು ಸಿಬಿಐ, ಐಟಿ ಮತ್ತು ಇಡಿಯ ಕೇಂದ್ರ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಇವರೆಲ್ಲರೂ ಮೂರು ನಾಲ್ಕು ವಾರಗಳ ಹಿಂದೆ ಸಭೆ ನಡೆಸಿದ್ದರು ಎಂಬ ಮಾಹಿತಿ ನಮಗೆ ದೊರಕಿದೆ. ಇದನ್ನು ನಾವು ಕೆಲವರ ಮೂಲಕ ಖಚಿತಪಡಿಸಿಕೊಂಡಿದ್ದೇವೆ” ಎಂದು ಡಿ.ಕೆ ಸುರೇಶ್ ತಿಳಿಸಿದ್ದಾರೆ.
“ಬೆದರಿಸಿದರೆ ನಾನು ಮತ್ತು ನನ್ನ ಕುಟುಂಬವನ್ನು ತಮ್ಮ ಮುಂದೆ ತಲೆಬಾಗುತ್ತದೆ ಎಂದು ಕೆಲವರು ತಿಳಿದಿದ್ದರೆ, ನಾವು ಹಾಗೆಲ್ಲ ಒತ್ತಡಕ್ಕೆ ಮಣಿಯುವರಲ್ಲ ಎಂಬುದನ್ನು ತಿಳಿದುಕೊಳ್ಳಲಿ. ನಾವು ಎಲ್ಲದಕ್ಕೂ ಸಿದ್ಧ. ಈ ಸಮಸ್ಯೆಗಳ ಬಗ್ಗೆ ನನಗೆ ತಿಳುವಳಿಕೆಯಿದೆ” ಎಂದು ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.







