ಮರ್ಧಾಳ: ಗೆಳೆಯರಿಗಾಗಿ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ ಹಿಂದೂ ಯುವಕ

ಕಡಬ, ಮೇ 31: ಹಿಂದೂ ಯುವಕನೋರ್ವ ತನ್ನ ಮುಸ್ಲಿಂ ಗೆಳೆಯರಿಗಾಗಿ ಮರ್ಧಾಳ ಮಸೀದಿಯಲ್ಲಿ ಗುರುವಾರ ಇಫ್ತಾರ್ ಕೂಟವನ್ನು ಏರ್ಪಡಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಮರ್ಧಾಳ ಪೂಜಾರಿ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ಭಗವತೀ ಹೋಟೆಲ್ ಮಾಲಕ ಗೋಪಾಲ ಕೃಷ್ಣ ಕಳೆದ ಮೂರು ವರ್ಷಗಳಿಂದ ತನ್ನ ಹೋಟೆಲ್‌ನಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸುತ್ತಿದ್ದು, ಈ ವರ್ಷ ಮರ್ಧಾಳ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದಾರೆ.
ಗೋಪಾಲಕೃಷ್ಣ ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ಧರ್ಮ ಧರ್ಮಗಳ ನಡುವೆ ವೈರಾಗ್ಯ ಕಂಡುಬರುತ್ತಿದ್ದು, ತಾನು ಸೌಹಾರ್ದತಾ ದೃಷ್ಟಿಯಿಂದ ಕಳೆದ ಮೂರು ವರ್ಷಗಳಿಂದ ಇಫ್ತಾರ್ ಕೂಟವನ್ನು ಆಯೋಜಿಸುತ್ತಿರುವುದಾಗಿ ಗೋಪಾಲಕೃಷ್ಣ ತಿಳಿಸಿದ್ದಾರೆ.
ಮರ್ಧಾಳದಲ್ಲಿ ಇಂತಹದೇ ಘಟನೆಗಳು ಈ ಹಿಂದೆಯೂ ಹಲವು ಬಾರಿ ನಡೆದಿತ್ತು. ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಮುಸ್ಲಿಂ ಯುವಕರು ಒಟ್ಟಾಗಿ ಭಾಗವಹಿಸಿದ್ದರು. ಅಲ್ಲದೆ ಮಿಲಾದುನ್ನಬಿ ಸಂದರ್ಭದಲ್ಲಿ ಆಟೋ ಚಾಲಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.





