ಜೂ.4 ರಂದು ಭಾರತ್ ಬಂದ್‌ಗೆ ಕರೆ

ಬೆಂಗಳೂರು, ಮೇ 31: ಗ್ರಾಮೀಣ ಅಂಚೆ ನೌಕರರಿಗೆ 7ನೆ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಜೂ.4ರಂದು ದೇಶಾದ್ಯಂತ ಬಂದ್ ಮಾಡಲಾಗುವುದು ಎಂದು ಗ್ರಾಮೀಣ ಅಂಚೆ ನೌಕರರ ಸಂಘ ನಿರ್ಧರಿಸಿದೆ.
ಅಂಚೆ ನೌಕರರಲ್ಲಿ ವೇತನ ತಾರತಮ್ಯ ನಿವಾರಿಸಿ ಕಮಲೇಶ್ ಚಂದ್ರ ವರದಿಯನ್ನು ಜಾರಿ ಮಾಡುವ ನಿಟ್ಟಿನಲ್ಲಿ 7ನೆ ವೇತನ ಆಯೋಗ ಜಾರಿ ಮಾಡುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ 11ನೆ ದಿನಕ್ಕೆ ಕಾಲಿಟ್ಟಿದೆ. ಆದರೂ ಕೇಂದ್ರ ಸರಕಾರ ಈ ಬಗ್ಗೆ ಮೌನ ವಹಿಸಿದೆ ಎಂದು ಗ್ರಾಮೀಣ ಅಂಚೆ ನೌಕರರ ಸಂಘದ ಕಾರ್ಯದರ್ಶಿ ಕೆ.ಎಸ್.ರುದ್ರೇಶ್ ಆರೋಪಿಸಿದರು.
ಬೆಂಗಳೂರು ವಿವಿಧ ಅಂಚೆ ಕಚೇರಿ ಮುಂದೆ ಪ್ರತಿನಿತ್ಯ ಪ್ರತಿಭಟನೆ ಮುಂದುವರೆಸಿದ್ದಾರೆ. ಕಮಲೇಶ್‌ಚಂದ್ರ ಆಯೋಗವು ಈಗಾಗಲೆ ವರದಿ ಸಲ್ಲಿಸಿ 18 ತಿಂಗಳಾಗಿದ್ದರೂ ಕೇಂದ್ರ ಸರಕಾರ ವರದಿ ಜಾರಿ ಮಾಡಲು ಹಿಂದೇಟು ಹಾಕುತ್ತಿದೆ. ಹೀಗಾಗಿ ನೇರವಾಗಿ ಕೇಂದ್ರ ಸರಕಾರದ ಗಮನ ಸೆಳೆಯಲೆಂದು ಮೇ 22 ರಿಂದ ಅಂಚೆ ನೌಕರರು ಆಯಾ ಜಿಲ್ಲಾ ಮುಖ್ಯ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ದೇಶಾದ್ಯಂತ ಸುಮಾರು 2.85ಲಕ್ಷ ಗ್ರಾಮೀಣ ಅಂಚೆ ಸಿಬ್ಬಂದಿಯಿದ್ದು, ವೇತನ ತಾರತಮ್ಯ ವಿರೋಧಿಸಿ ಲಕ್ಷಕ್ಕೂ ಅಧಿಕ ಸಂಖ್ಯೆಯ ನೌಕರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇನ್ನು ರಾಜ್ಯ ನೌಕರರ ಸಂಘದ ವತಿಯಿಂದ ಮೇ 28ರಂದು ರಾಜಭವನಕ್ಕೆ 4 ಸಾವಿರ ನೌಕರರು ತೆರಳಿ ಮನವಿ ಸಲ್ಲಿಸಿದ್ದೇವೆ. ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹಾಗೂ ಅನಂತಕುಮಾರ್‌ಗೂ ಮನವಿ ಸಲ್ಲಿಸಿದ್ದೇವೆ. ಸರಕಾರ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜೂ.4ರಂದು ಭಾರತ್ ಬಂದ್ ನಡೆಸುವುದು ಖಚಿತವೆಂದು ಅವರು ಎಚ್ಚರಿಕೆ ನೀಡಿದರು.







