ಹೈಕೋರ್ಟ್ ಸಿಬ್ಬಂದಿಯ ಪರಿಷ್ಕೃತ ವೇತನವನ್ನು ಒಂದು ವಾರದೊಳಗೆ ಪಾವತಿಸಿ: ಹೈಕೋರ್ಟ್ ನಿರ್ದೇಶನ

ಬೆಂಗಳೂರು, ಮೇ 30: ರಾಜ್ಯ ಹೈಕೋರ್ಟ್ ಸಿಬ್ಬಂದಿಯ ಪರಿಷ್ಕೃತ ವೇತನ ಹಾಗೂ ಹಿಂಬಾಕಿಯನ್ನು ಒಂದು ವಾರದೊಳಗೆ ಪಾವತಿ ಮಾಡುವಂತೆ ರಾಜ್ಯ ಹಣಕಾಸು ಇಲಾಖೆಗೆ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ.
ಕೇಂದ್ರ ಸರಕಾರಿ ನೌಕರರ ವೇತನ ಶ್ರೇಣಿಗೆ ಅನುಗುಣವಾಗಿ ಹೈಕೋರ್ಟ್ ನೌಕರರ ವೇತನ ಪರಿಷ್ಕರಣೆಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಪಾಲಿಸದ ರಾಜ್ಯ ಸರಕಾರದ ವಿರುದ್ಧ ನಿವೃತ್ತ ನೌಕರ ನಿಜಗುಣಿ ಎಂ. ಕರಡಿಗುಡ್ಡ ಮತ್ತು ಕರ್ನಾಟಕ ಹೈಕೋರ್ಟ್ ನೌಕರರ ಕಲ್ಯಾಣ ಸಂಘ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ಪೀಠದಲ್ಲಿ ಗುರುವಾರ ನಡೆಯಿತು.
ಸದ್ಯ ಧಾರವಾಡ ಪೀಠದಲ್ಲಿರುವ ನ್ಯಾಯಮೂರ್ತಿ ಬಿ.ವಿ. ನಾಗರತ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿ ವಿಚಾರಣೆಯಲ್ಲಿ ಪಾಲ್ಗೊಂಡರು. ಈ ವೇಳೆ ಸರಕಾರಿ ವಕೀಲ ಡಿ. ನಾಗರಾಜ್ ನ್ಯಾಯಪೀಠಕ್ಕೆ ವರದಿ ಸಲ್ಲಿಸಿ, ಈಗಾಗಲೇ ಹೈಕೊರ್ಟ್ ನೌಕರರಿಗೆ ಎಪ್ರಿಲ್ ಹಾಗೂ ಮೇ ತಿಂಗಳ ಪರಿಷ್ಕೃತ ವೇತನ ಪಾವತಿಸಲಾಗಿದೆ. 2 ವಾರಗಳಲ್ಲಿ ಎಲ್ಲ ನೌಕರರಿಗೂ ಸಂಪೂರ್ಣ ಹಿಂಬಾಕಿ ಪಾವತಿಸಲಾಗುವುದು ಎಂದು ತಿಳಿಸಿದರು.
ಆದರೆ, 2 ವಾರ ಕಾಲಾವಕಾಶ ನೀಡಲು ನಿರಾಕರಿಸಿದ ನ್ಯಾಯಪೀಠ, ಇನ್ನೊಂದು ವಾರದಲ್ಲಿ ನೂತನ ವೇತನ ಶ್ರೇಣಿಯ ಅನುಸಾರ ಹೈಕೋರ್ಟ್ ನೌಕರರಿಗೆ ವೇತನ ಹಾಗೂ ಹಿಂಬಾಕಿ ಪಾವತಿಸಬೇಕು. ಈ ವೇಳೆ ನಿವೃತ್ತ ನೌಕರರಿಗೆ ಮೊದಲ ಆದ್ಯತೆ ಕಲ್ಪಿಸಬೇಕು ಎಂದು ಸರಕಾರಕ್ಕೆ ನಿರ್ದೇಶಿಸಿತು.
ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಆದೇಶದಂತೆ ನೌಕರರಿಗೆ ಪರಿಷ್ಕೃತ ವೇತನ ಹಾಗೂ ಹಿಂಬಾಕಿ ಪಾವತಿಸಿದ ಕುರಿತು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ. ಆ ಬಳಿಕ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಡುವ ಕುರಿತು ನಿರ್ಧರಿಸೋಣ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಒಂದು ವಾರ ಮುಂದೂಡಿತು.







