ಅಮೇರಿಕದ ಆ್ಯಪ್ ಅನ್ನು ಸ್ವದೇಶೀ ಮೆಸೇಜಿಂಗ್ ಆ್ಯಪ್ ಎಂದು ಬಿಡುಗಡೆ ಮಾಡಿದ ಬಾಬಾ ರಾಮದೇವ್ ರ ಕಂಪೆನಿ !

ಹೊಸದಿಲ್ಲಿ , ಮೇ 31: ಇತ್ತೀಚಿಗೆ ಹೊಸ ಸಿಮ್ ಕಾರ್ಡ್ ಬಿಡುಗಡೆ ಮಾಡಿದ ಬೆನ್ನಿಗೇ ಬಾಬಾ ರಾಮದೇವ್ ಬುಧವಾರ ಹೊಸ ಮೆಸೇಜಿಂಗ್ ಆ್ಯಪ್ ಬಿಡುಗಡೆ ಮಾಡಿದರು. ಇದರ ಹೆಸರು ಕಿಂಬೋ (KIMBHO). ರಾಮದೇವ್ ನೇತೃತ್ವದ ಪತಂಜಲಿ ಸಮೂಹದ ಇತರ ಉತ್ಪನ್ನಗಳಂತೆ ಕಿಂಬೋ ಸಹ ಸ್ವದೇಶೀ ಮೆಸೇಜಿಂಗ್ ಆ್ಯಪ್, ಇದು ಫೇಸ್ ಬುಕ್ ಮಾಲಕತ್ವದ ವಾಟ್ಸ್ ಆ್ಯಪ್ ಗೆ ಪರ್ಯಾಯ ಎಂದು ಭಾರೀ ಪ್ರಚಾರ ನೀಡಲಾಯಿತು.
ಆದರೆ ಬಿಡುಗಡೆಯಾದ ಮರುದಿನವೇ ಕಿಂಬೋ ಗೂಗಲ್ 'ಪ್ಲೇ ಸ್ಟೋರ್'ನಿಂದ ಮಾಯವಾಯಿತು. ಸಾಲದ್ದಕ್ಕೆ ಈಗ ರಾಮದೇವ್ ಮೇಲೆ ಹೊಸ ಆರೋಪ ಬಂದಿದೆ. ಅದೇನೆಂದರೆ, ಈ ಆ್ಯಪ್ ಅನ್ನು ಪತಂಜಲಿ ಗ್ರೂಪ್ ಮಾಡಿಯೇ ಇಲ್ಲ. ಅಮೇರಿಕಾದ ಕಂಪೆನಿಯೊಂದು ಮಾಡಿರುವ ಆ್ಯಪ್ ಆನ್ನು ಖರೀದಿಸಿ ಅದಕ್ಕೆ ಹೊಸ ಹೆಸರಿಟ್ಟು ಬಿಡುಗಡೆ ಮಾಡಿದ್ದಾರೆ ಬಾಬಾ!.
ಈ ಬಗ್ಗೆ Alt News.in ವಿವರವಾದ ತನಿಖೆ ಮಾಡಿ ಬಾಬಾ ಬಿಡುಗಡೆ ಮಾಡಿರುವ 'ಅಪ್ಪಟ ಸ್ವದೇಶೀ' ಆ್ಯಪ್ ನ ಬಂಡವಾಳವನ್ನು ಬಯಲು ಮಾಡಿದೆ. ಆಲ್ಟ್ ನ್ಯೂಸ್ ತನಿಖೆಯಲ್ಲಿ ತಿಳಿದು ಬಂದಿದ್ದೇನೆಂದರೆ ಬಾಬಾ ಬಿಡುಗಡೆ ಮಾಡಿರುವ ಮೆಸೇಜಿಂಗ್ ಆ್ಯಪ್ ಸ್ವದೇಶೀ ಅಲ್ಲವೇ ಅಲ್ಲ . ಅದನ್ನು ಅಮೇರಿಕಾದ ಕಂಪೆನಿಯೊಂದು ಬಹಳ ಹಿಂದೆಯೇ ತಯಾರಿಸಿತ್ತು. ಆಗ ಆ ಆ್ಯಪ್ ನ ಹೆಸರು ಇದ್ದದ್ದು ‘Bolo Chat’. ಇದನ್ನು ತಯಾರಿಸಿರುವ ಕಂಪೆನಿಯ ಹೆಸರು Appdios Inc. ಆ ಕಂಪೆನಿಯ ಸ್ಥಾಪಕರು ಸುಮಿತ್ ಕುಮಾರ್ ಮತ್ತು ಅದಿತಿ ಕಮಲ್.

ಈ ಆ್ಯಪ್ ಅನ್ನು ಅಮೇರಿಕಾದ ಕಂಪೆನಿ ಡಿಸೆಂಬರ್ 2015 ರಲ್ಲೇ ಬಿಡುಗಡೆ ಮಾಡಿತ್ತು. ಬಳಿಕ 2016ರಲ್ಲಿ ಆ ಕಂಪೆನಿ ಮುಚ್ಚಿದೆ ಎಂದು ಕ್ಯಾಲಿಫೋರ್ನಿಯಾ ಸೆಕ್ರೆಟರಿ ಆಫ್ ಸ್ಟೇಟ್ ವೆಬ್ ಸೈಟ್ ವಿವರ ನೀಡುತ್ತಿದೆ. ಅಂದರೆ ಈ ಹಿಂದೆಯೇ ಬಿಡುಗಡೆಯಾಗಿದ್ದ ಅಮೇರಿಕ ಕಂಪೆನಿಯ ಆ್ಯಪ್ ಒಂದನ್ನು ರಾಮದೇವ್ ಖರೀದಿಸಿ ಅದಕ್ಕೆ ಹೊಸ ಹೆಸರಿಟ್ಟು ಸ್ವದೇಶೀ ಆ್ಯಪ್ ಎಂದು ಭಾರತೀಯರ ಕಿವಿಗೆ ಹೂವಿಡಲು ಪ್ರಯತ್ನಿಸಿದ್ದಾರೆ.

altnews ವಿವರವಾದ ತನಿಖಾ ವರದಿ ಪ್ರಕಟಿಸುತ್ತಲೇ Bolo Chat ನ ಫೇಸ್ ಬುಕ್ ಪುಟವನ್ನು ಡಿಲೀಟ್ ಮಾಡಲಾಗಿದೆ.








