ಕಂಕನಾಡಿ: ಕುಸಿದ ಆವರಣ ಗೋಡೆ- ಎಚ್ಚೆತ್ತುಕೊಳ್ಳದ ಮನಪಾ

ಮಂಗಳೂರು, ಮೇ 31: ಮಂಗಳವಾರ ಸುರಿದ ಭಾರೀ ಮಳೆಗೆ ನಗರದ ಕಂಕನಾಡಿಯ ಖಾಸಗಿ ಆಸ್ಪತ್ರೆಯ ಆವರಣ ಗೋಡೆಯು ಬುಧವಾರ ಕುಸಿದಿದೆ. ಈ ಸಂದರ್ಭ ಆಸುಪಾಸು ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ.
ಈ ಆವರಣ ಗೋಡೆಯು ಕುಸಿಯುವ ಸಾಧ್ಯತೆಯ ಬಗ್ಗೆ ‘ವಾರ್ತಾಭಾರತಿ’ಯು ಕಳೆದ ರವಿವಾರವಾರವೇ ಸುದ್ದಿ ಪ್ರಕಟಸಿತ್ತು. ಆದರೆ ಸ್ಥಳೀಯ ಕಾರ್ಪೊರೇಟರ್ ಸಹಿತ ಮನಪಾ ಆಡಳಿತ ವರ್ಗ ಯಾವುದೇ ರೀತಿಯಲ್ಲೂ ಸ್ಪಂದಿಸಿರಲಿಲ್ಲ.
ಮಂಗಳವಾರ ರಾತ್ರಿಯಿಂದಲೇ ಅಲ್ಲಲ್ಲಿ ಧರೆ ಕುಸಿತದಂತಹ ಪ್ರಕೃತಿ ವಿಕೋಪ ಸಂಭವಿಸುತ್ತಿತ್ತು. ಅದರ ಮಧ್ಯೆಯೇ ಕಂಕನಾಡಿಯ ಖಾಸಗಿ ಆಸ್ಪತ್ರೆಯ ಆವರಣ ಗೋಡೆ ಕುಸಿದು ಎರಡು ದಿನವಾದರೂ ಕೂಡಾ ಅದನ್ನು ತೆರವುಗೊಳಿಸುವ ಕಾರ್ಯ ನಡೆದಿಲ್ಲ.
ಈ ಆವರಣ ಗೋಡೆಯ ಪಕ್ಕದಲ್ಲೇ ಕಾಲು ದಾರಿಯಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ನಡೆದಾಡುತ್ತಿದ್ದಾರೆ. ರಿಕ್ಷಾ ಪಾರ್ಕ್ ಅಲ್ಲದೆ, ಮೊಬೈಲ್ ಕ್ಯಾಂಟೀನ್, ಸಣ್ಣಪುಟ್ಟ ಗೂಡಂಗಡಿಗಳೂ ಇವೆ. ಆಸ್ಪತ್ರೆಯ ಪ್ರವೇಶ ದ್ವಾರದ ಆವರಣ ಗೋಡೆಯ ಒಂದು ಭಾಗ ಮಾತ್ರ ಕುಸಿದಿದೆ. ಉದ್ದಕ್ಕೆ ಇನ್ನೂ ಆವರಣ ಗೋಡೆ ಕುಸಿಯುವ ಭೀತಿ ಇದೆ. ಸಂಬಂಧಪಟ್ಟವರು ಇನ್ನಾದರು ಎಚ್ಚೆತ್ತುಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.