ಸುಪ್ರೀಂ ಜಾಮೀನು ನೀಡಿದರೂ ಆರೋಪಿ ಬಿಡುಗಡೆಗೆ ನಿರಾಕರಿಸಿದ ಕೆಳ ನ್ಯಾಯಾಲಯ

ಹೊಸದಿಲ್ಲಿ, ಮೇ 31: ಆರೋಪಿಯೊಬ್ಬನಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದರೂ ಆತನನ್ನು ಬಿಡುಗಡೆ ಮಾಡಲು ಮುಂಬೈಯ ಕೆಳನ್ಯಾಯಾಲಯ ನಿರಾಕರಿಸಿರುವ ವಿಶಿಷ್ಟ ಪ್ರಕರಣ ನಡೆದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್‌ನ ನ್ಯಾಯಪೀಠವು, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸುಪ್ರೀಂಕೋರ್ಟ್‌ಗಿಂತ ಮೇಲ್ಮಟ್ಟದಲ್ಲಿದೆಯೇ, ಅಥವಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸುಪ್ರೀಂಕೋರ್ಟ್‌ನ ಮೇಲ್ಮನವಿ ನ್ಯಾಯಾಲಯವೇ ಎಂದು ಪ್ರಶ್ನಿಸಿದೆ.
ಆರೋಪಿಯೊಬ್ಬ ಜಾಮೀನು ಕೋರಿ ಸಲ್ಲಿಸಿದ್ದ ಮನವಿಯನ್ನು ಮುಂಬೈಯ ಹೆಚ್ಚುವರಿ ಪ್ರಧಾನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ (ಎಸಿಎಂಎಂ) ತಳ್ಳಿಹಾಕಿತ್ತು. ಆತ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು ಆತನಿಗೆ ಜಾಮೀನು ಮಂಜೂರುಮಾಡಿ ಮೇ 17ರಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
ಆದರೆ ಸುಪ್ರೀಂಕೋರ್ಟ್‌ನ ಆದೇಶದಲ್ಲಿ ಜಾಮೀನು ಭದ್ರತೆಯ ಮೊತ್ತದ ಬಗ್ಗೆ ವಿವರವಿಲ್ಲ ಎಂದು ತಿಳಿಸಿದ ಎಸಿಎಂಎಂ ಆರೋಪಿಯನ್ನು ಬಿಡುಗಡೆಗೊಳಿಸಲು ನಿರಾಕರಿಸಿತ್ತು. ಈ ವಿಷಯವನ್ನು ಆರೋಪಿ ಪರ ವಕೀಲರು ಸುಪ್ರೀಂಕೋರ್ಟ್‌ನ ಗಮನಕ್ಕೆ ತಂದಿದ್ದರು. ಸುಪ್ರೀಂಕೋರ್ಟ್ ಆದೇಶ ನೀಡಿದರೆ ಅದನ್ನು ಪಾಲಿಸಬೇಕು. ಸುಪ್ರೀಂಕೋರ್ಟ್ ಜಾಮೀನು ಮಂಜೂರುಗೊಳಿಸಿದೆ. ಜಾಮೀನು ಭದ್ರತೆಯ ಮೊತ್ತವನ್ನು ನಿರ್ಧರಿಸುವ ಜವಾಬ್ದಾರಿ ಕೆಳ ನ್ಯಾಯಾಲಯದ್ದಾಗಿದೆ. ಆದ್ದರಿಂದ ಈ ಕಾರಣ ನೀಡಿ ಆರೋಪಿಯನ್ನು ಬಿಡುಗಡೆಗೊಳಿಸದಿರುವುದು ಸಮರ್ಥನೀಯವಲ್ಲ ಎಂದು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾದ ಎಲ್. ನಾಗೇಶ್ವರ ರಾವ್ ಮತ್ತು ಮೋಹನ್ ಎಂ. ಶಾಂತಗೌಡರ್ ಅವರಿದ್ದ ನ್ಯಾಯಪೀಠ ತಿಳಿಸಿದೆ.







