ಬಾಗೇಪಲ್ಲಿ: ಅಂಗಡಿಗೆ ನುಗ್ಗಿದ ಲಾರಿ; ಮಹಿಳೆ ಮೃತ್ಯು

ಬಾಗೇಪಲ್ಲಿ,ಮೇ.31: ಲಾರಿಯೊಂದು ಅಂಗಡಿಗೆ ನುಗ್ಗಿದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಗೂಳೂರು ಹೋಬಳಿ ವ್ಯಾಪ್ತಿಯ ಜಿ.ಮದ್ದೇಪಲ್ಲಿ ಕ್ರಾಸ್‍ನಲ್ಲಿ ನಡೆದಿದೆ.
ಮೃತಳನ್ನು ತಾಲೂಕಿನ ತಿಮ್ಮಂಪಲ್ಲಿ ಗ್ರಾ.ಪಂ ವ್ಯಾಪ್ತಿಯ ತಟ್ಟನ್ನಗಾರಿಗಾರಿಪಲ್ಲಿ ಗ್ರಾಮದ ಕೆಂಪಮ್ಮ ಲೇ.ವೆಂಕಟರಾಮಪ್ಪ(53) ಎಂದು ಗುರುತಿಸಲಾಗಿದೆ.
ಮೃತಪಟ್ಟಿರುವ ಕೆಂಪಮ್ಮ ತಾಲೂಕಿನ ಜಿ.ಮದ್ದೇಪಲ್ಲಿ ಕ್ರಾಸ್‍ನಲ್ಲಿ ರಸ್ತೆ ಬದಿಯಲ್ಲಿ ಚಿಕ್ಕದಾಗಿ ಚಿಲ್ಲರೆ ಅಂಗಡಿ ಮತ್ತು ಟೀ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.
ಕಳೆದ ಮಂಗಳವಾರ ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಬಾಗೇಪಲ್ಲಿ ಕಡೆಯಿಂದ ಬಿಳ್ಳೂರು ಮಾರ್ಗದಲ್ಲಿ ಅತೀ ವೇಗವಾಗಿ ಬೃಹತ್ ಸಿಮೆಂಟ್ ಲಾರಿ(ಕೆ.ಎ.01ಎಸಿ1352)ಯನ್ನು ಚಾಲನೆ ಮಾಡಿಕೊಂಡು ಬಂದ ಚಾಲಕ ಏಕಾಏಕಿಯಾಗಿ ಅಂಗಡಿಗೆ ನುಗ್ಗಿಸಿರುವ ಪರಿಣಾಮ ಕೆಂಪಮ್ಮ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ನಂತರ ಲಾರಿ ಚಾಲಕ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಈ ಸಂಬಂಧ ಘಟನಾ ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಗೋವಿಂದರಾಜು ರವರು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡು ಲಾರಿಯನ್ನು ವಶಕ್ಕೆ ಪಡೆದು, ಪರಾರಿಯಾಗಿರುವ ಚಾಲಕನ ಪತ್ತೆಗಾಗಿ ಬಲೆ ಬೀಸಿದ್ದಾರೆ.







