ತುಳು ಪಠ್ಯ ಜಾರಿಗೆ ಮಂಗಳೂರು ವಿವಿ ತಾತ್ವಿಕ ಒಪ್ಪಿಗೆ: ಚಂದ್ರಹಾಸ ರೈ
ಉಡುಪಿ, ಮೇ 31: ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ತುಳು ಭಾಷಾ ಪಠ್ಯದ ಜಾರಿಗೆ ಮಂಗಳೂರು ವಿವಿ ತಾತ್ವಿಕ ಅನುಮೋದನೆ ನೀಡಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ತಿಳಿಸಿದ್ದಾರೆ.
ತುಳು ಭಾಷಾ ಪಠ್ಯ ಕಲಿಕೆ ಅವಕಾಶವನ್ನು ವಿದ್ಯಾರ್ಥಿಗಳಿಗೆ ಒದಗಿಸುವ ನಿಟ್ಟಿನಲ್ಲಿ ಉಡುಪಿಯ ಬೋರ್ಡ್ ಹೈಸ್ಕೂಲು ಸಭಾಂಗಣದಲ್ಲಿ ಗುರುವಾರ ನಡೆದ ಶಾಲಾ ಮುಖ್ಯಸ್ಥರ ಸಭೆಯನ್ನುದೆ್ದೀಶಿಸಿ ಅವರು ಮಾತನಾಡುತಿದ್ದರು.
ನಿಯಮಾವಳಿ ಸಹಿತ ಪಠ್ಯ ಸಮಿತಿ ರಚನೆ ಪ್ರಕ್ರಿಯೆ ನಡೆಯುತ್ತಿದ್ದು 2018- 19ನೇ ಸಾಲಿನಲ್ಲೇ ಮಂಗಳೂರು ವಿವಿ ಕಾಲೇಜಿನಲ್ಲಿ ತುಳು ಪಠ್ಯ ಸಂಧ್ಯಾ ತರಗತಿ ಆರಂಭವಾಗಲಿದೆ. ತೃತೀಯ ಭಾಷೆಯಾಗಿ ತುಳು ಭಾಷಾ ಪಠ್ಯ ಕಲಿತವರು ಎಸೆಸೆಲ್ಸಿಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಗೊಳ್ಳುವ ಅವಕಾಶವಿದೆ ಎಂದವರು ನುಡಿದರು.
ಈ ಬಾರಿಯ (2018) ಎಸೆಸೆಲ್ಸಿ ಪರೀಕ್ಷೆ ಬರೆದ ಎಲ್ಲಾ 417 ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದು, 2017-18ನೇ ಸಾಲಿನಲ್ಲಿ 35 ಶಾಲೆಗಳಲ್ಲಿ 1,650 ವಿದ್ಯಾರ್ಥಿಗಳು ವಿವಿಧ ತರಗತಿಗಳಲ್ಲಿ ‘ತುಳು ಎಸಳ್’ ಪಠ್ಯ ಶಿಕ್ಷಣ ಪಡೆದಿದ್ದಾರೆ. ಆದರೆ ಉಡುಪಿ ಜಿಲ್ಲೆಯ ಎರಡು ಶಾಲೆಗಳಲ್ಲಿ ಮಾತ್ರ 50 ಮಂದಿ ವಿದ್ಯಾರ್ಥಿಗಳಿದ್ದಾರೆ ಎಂದರು.
ಈ ನಿಟ್ಟಿನಲ್ಲಿ ಮುಖ್ಯ ಶಿಕ್ಷಕರು, ಶಿಕ್ಷಕರ ಒತ್ತಾಯ ಹಾಗೂ ಒತ್ತಡಗಳಿಲ್ಲದೆ ಮಕ್ಕಳು ತೃತೀಯ ಭಾಷೆಯಾಗಿ ತುಳು ಭಾಷಾ ಪಠ್ಯ ಕಲಿಯುವ ನಿಟ್ಟಿನಲ್ಲಿ ಹೆತ್ತವರ ಒಪ್ಪಿಗೆ ನೀಡಿ ಪ್ರೋತ್ಸಾಹಿಸಬೇಕು ಎಂದ ಚಂದ್ರಹಾಸ ರೈ, ಈಗ ತುಳುವಿನ ಗೌರವ ಶಿಕ್ಷಕರಿಗೆ ಮಾಸಿಕ 3,000 ರೂ.ಗಳಂತೆ 10 ತಿಂಗಳ ವೇತನವನ್ನು ಅಕಾಡೆಮಿ ನೀಡುತ್ತಿದೆ ಎಂದು ವಿವರಿಸಿದು.
ತುಳು ಪಠ್ಯ ಕಲಿಕೆ ಅವಕಾಶವನ್ನು ಪಿಯುಸಿಗೂ ವಿಸ್ತರಿಸಲು ಮನವಿ ಮಾಡಲಾಗಿದೆ. ತುಳು ಪಠ್ಯದ ಮೂಲಕ ಭಾಷೆ, ಸಂಸ್ಕೃತಿಯ ಅರಿವು ಪಡೆಯಲು ಸಾಧ್ಯ. ಮಾತೃ ಭಾಷಾ ಕಲಿಕೆ ಹಿನ್ನೆಲೆಯಲ್ಲಿ ತುಳುನಾಡಲ್ಲಿ ತುಳು ಪಠ್ಯ ಕಲಿಕೆ ಹೆಚ್ಚು ಸೂಕ್ತ ಎಂದವರು ಅಭಿಪ್ರಾಯಪಟ್ಟರು.
ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ ಮಾತನಾಡಿ, ಹೊರ ಊರಲ್ಲಿರುವವರು ತುಳು ಭಾಷೆ ಉಳಿಸಿದ್ದಾರೆ. ಬಂಟ್ವಾಳದ 9 ಶಾಲೆಗಳಲ್ಲಿ ಮಕ್ಕಳಿಗೆ ತುಳು ಲಿಪಿ ಬರೆದು, ಓದುವ ಪ್ರಯೋಗ ಮಾಡಿದ್ದು ಈ ಪ್ರಕ್ರಿಯೆ ಎಲ್ಲಾ ಕಡೆ ನಡೆಯುವಂತಾಗಬೇಕು ಎಂದರು.
ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ವೈದ್ಯಕೀಯ, ಎಂಜಿನಿಯರಿಂಗ್ ಸಹಿತ ಉನ್ನತ ಶಿಕ್ಷಣದಲ್ಲಿರುವ ತುಳು ಮಾತೃ ಭಾಷೆಗೆ ನಿಗದಿಯಾಗಿರುವ ಸ್ಥಾನಗಳನ್ನು ಶಾಲೆಯಲ್ಲಿ ತುಳು ಕಲಿತವರಿಗಷ್ಟೇ ನೀಡಬೇಕು ಎಂದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ್, ಬಿಇಒ ಕಚೇರಿಯ ಶಿಕ್ಷಣ ಸಂಯೋಜಕ ಶಂಕರ್ ಉಪಸ್ಥಿತರಿದ್ದರು.







