ಅಮೆರಿಕದ ಸೇನಾ ಘಟಕ ಇನ್ನು ‘ಇಂಡೋ-ಪೆಸಿಫಿಕ್ ಕಮಾಂಡ್’: ಮಹತ್ವದ ಮರುನಾಮಕರಣ

ಜೇಮ್ಸ್ ಮ್ಯಾಟಿಸ್
ವಾಶಿಂಗ್ಟನ್, ಮೇ 31: ಭಾರತದೊಂದಿಗಿನ ಬೆಳೆಯುತ್ತಿರುವ ರಕ್ಷಣಾ ಸಹಕಾರದ ದ್ಯೋತಕವೆಂಬಂತೆ, ಅಮೆರಿಕವು ತನ್ನ ಸೇನಾ ಘಟಕ ‘ಪೆಸಿಫಿಕ್ ಕಮಾಂಡ್’ಗೆ ಬುಧವಾರ ‘ಇಂಡೋ-ಪೆಸಿಫಿಕ್ ಕಮಾಂಡ್’ ಎಂಬುದಾಗಿ ಮರುನಾಮಕರಣ ಮಾಡಿದೆ.
ಪೆಸಿಫಿಕ್ ಕಮಾಂಡ್ನ ನೆಲೆ ಇರುವ ಪ್ರದೇಶವು ಚೀನಾಕ್ಕೆ ಸಮೀಪದಲ್ಲಿದ್ದು, ಅದರ ಮೇಲೆ ಹೆಚ್ಚಿನ ನಿಗಾ ಇಡುವ ದೃಷ್ಟಿಯಿಂದಲೂ ಈ ಕ್ರಮ ಮಹತ್ವದ್ದಾಗಿದೆ ಎನ್ನಲಾಗಿದೆ.
ಚೀನಾವನ್ನು ಅಮೆರಿಕದ ಟ್ರಂಪ್ ಆಡಳಿತ ತನ್ನ ‘ಆಯಕಟ್ಟಿನ ಪ್ರತಿಸ್ಪರ್ಧಿ’ ಎಂಬುದಾಗಿ ಪರಿಗಣಿಸುತ್ತಿದೆ.
‘‘ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳ ನಡುವಿನ ಹೆಚ್ಚುತ್ತಿರುವ ಸಂಪರ್ಕಗಳನ್ನು ಪರಿಗಣಿಸಿ, ಇಂದು ನಾವು ‘ಯುಎಸ್ ಪೆಸಿಫಿಕ್ ಕಮಾಂಡ್’ನ್ನು ‘ಯುಎಸ್ ಇಂಡೋ-ಪೆಸಿಫಿಕ್ ಕಮಾಂಡ್’ ಎಂಬುದಾಗಿ ಮರುನಾಮಕರಣ ಮಾಡುತ್ತಿದ್ದೇವೆ’’ ಎಂದು ಕಮಾಂಡ್ನ ಪ್ರಧಾನ ನೆಲೆ ಅಮೆರಿಕದ ಹವಾಯಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಹೇಳಿದರು.
‘‘ಹಲವಾರು ದಶಕಗಳ ಅವಧಿಯಲ್ಲಿ ಈ ಕಮಾಂಡ್ ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ನಿರಂತರವಾಗಿ ಹೊಂದಿಕೊಳ್ಳುತ್ತಾ ಬಂದಿದೆ. ಇಂದು ನಾವು ಆ ಪರಂಪರೆಯನ್ನು ಮುಂದುವರಿಸಿದ್ದೇವೆ’’ ಎಂದರು.
ಈ ಕಮಾಂಡನ್ನು ‘ನಮ್ಮ ಪ್ರಾಥಮಿಕ ಯುದ್ಧ ಕಮಾಂಡ್’ ಎಂಬುದಾಗಿ ಬಣ್ಣಿಸಿದ ಅಮೆರಿಕದ ರಕ್ಷಣಾ ಕಾರ್ಯದರ್ಶಿ, ಅದು ಭೂಮಿಯ ಮೇಲ್ಮೈಯ ಅರ್ಧಕ್ಕೂ ಹೆಚ್ಚು ಪ್ರದೇಶದ ಉಸ್ತುವಾರಿಯನ್ನು ಹೊಂದಿದೆ ಎಂದರು. ‘‘ಅದು ಹಾಲಿವುಡ್ನಿಂದ ಬಾಲಿವುಡ್ವರೆಗಿನ ಜನರೊಂದಿಗೆ ಸಂಪರ್ಕ ಹೊಂದಿದೆ ಹಾಗೂ ಹಿಮಕರಡಿಗಳಿಂದ ಪೆಂಗ್ವಿನ್ಗಳವರೆಗೆ ವ್ಯಾಪ್ತಿ ಹೊಂದಿದೆ’’ ಎಂದು ಅವರು ಬಣ್ಣಿಸಿದರು.
ಮರುನಾಮಕರಣ ಸಾಂಕೇತಿಕ
ಕಮಾಂಡ್ನ ಮರುನಾಮಕರಣವು ಸಾಂಕೇತಿಕವಾಗಿದೆ. ಯಾಕೆಂದರೆ, ಭೌತಿಕವಾಗಿ ಕಮಾಂಡ್ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಅಮೆರಿಕದ ಆರು ಯುದ್ಧ ಕಮಾಂಡ್ಗಳ ಪೈಕಿ ಇಂಡೋ-ಪೆಸಿಫಿಕ್ ಕಮಾಂಡ್ ಒಂದಾಗಿದೆ. ಭಾರತ, ಚೀನಾ, ಆಸ್ಟ್ರೇಲಿಯ, ಜಪಾನ್, ಆಸಿಯಾನ್ ದೇಶಗಳು ಮತ್ತು ಎರಡು ಕೊರಿಯಗಳು ಸೇರಿದಂತೆ 38 ದೇಶಗಳ ವ್ಯಾಪ್ತಿಯನ್ನು ಅದು ಹೊಂದಿದೆ.







