ಭಾರತೀಯರ ಸುರಕ್ಷತೆಗೆ ಹೆಚ್ಚಿನ ಶ್ರಮ
ಭಾರತೀಯ ನಿಯೋಗಕ್ಕೆ ಅಫ್ಘಾನ್ ರಕ್ಷಣಾ ಅಧಿಕಾರಿ ಭರವಸೆ

ಕಾಬೂಲ್, ಮೇ 31: ಅಫ್ಘಾನಿಸ್ತಾನದಲ್ಲಿ ಏಳು ಭಾರತೀಯ ಇಂಜಿನಿಯರ್‌ಗಳ ಅಪಹರಣ ಸಂಭವಿಸಿ ವಾರಗಳು ಉರುಳಿವೆ ಹಾಗೂ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, ಎಲ್ಲ ಭಾರತೀಯ ಪ್ರಜೆಗಳ ಸುರಕ್ಷತೆಗಾಗಿ ಅಫ್ಘಾನ್ ಅಧಿಕಾರಿಗಳು ಕಠಿನ ಪರಿಶ್ರಮ ಪಡುತ್ತಿದ್ದಾರೆ ಎಂದು ಆ ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರ ಹನೀಫ್ ಅತ್ಮಾರ್ ಬುಧವಾರ ಹೇಳಿದ್ದಾರೆ.
ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿರುವ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಜಿಂದರ್ ಖನ್ನಾ ನೇತೃತ್ವದ ಭಾರತೀಯ ಉನ್ನತಾಧಿಕಾರದ ನಿಯೋಗವೊಂದಕ್ಕೆ ಅವರು ಈ ಭರವಸೆ ನೀಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ವಿದ್ಯುತ್ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಏಳು ಭಾರತೀಯ ಇಂಜಿನಿಯರ್‌ಗಳನ್ನು ಬಗ್ಲನ್ ರಾಜ್ಯದಲ್ಲಿ ಮೇ 6ರಂದು ಅಪಹರಿಸಲಾಗಿತ್ತು.
‘‘ಅಫ್ಘಾನಿಸ್ತಾನದಲ್ಲಿರುವ ಭಾರತೀಯ ಪ್ರಜೆಗಳ ಭದ್ರತೆಯನ್ನು ಖಾತರಿಪಡಿಸಲು ನಾವು ಕಠಿಣ ಪರಿಶ್ರಮ ಪಡಲಿದ್ದೇವೆ ಎಂಬ ಭರವಸೆಯನ್ನು ನಾವು ನಿಮಗೆ ನೀಡುತ್ತೇವೆ’’ ಎಂದು ಅಪಹೃತ ಭಾರತೀಯರನ್ನು ಉಲ್ಲೇಖಿಸದೆ ಅತ್ಮಾರ್ ಟ್ವೀಟ್ ಮಾಡಿದ್ದಾರೆ.
ಭೇಟಿಯ ವೇಳೆ, ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಸಾಮಾನ್ಯ ಭದ್ರತಾ ಪರಿಸ್ಥಿತಿಯ ಬಗ್ಗೆ ಅತ್ಮಾರ್ ವಿವರಣೆಯನ್ನು ನೀಡಿದರು.







