ಡೋಪಿಂಗ್ ಟೆಸ್ಟ್‌ನಲ್ಲಿ ಸಂಜಿತಾ ಚಾನು ವಿಫಲ: ಐಡಬ್ಲ್ಯುಎಫ್

ಹೊಸದಿಲ್ಲಿ, ಮೇ 31: ಕಳೆದ ತಿಂಗಳು ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಭಾರತದ ವೇಟ್‌ಲಿಫ್ಟರ್ ಕೆ.ಸಂಜಿತಾ ಚಾನು ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದು ಅಂತರ್‌ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಶನ್(ಐಡಬ್ಲು ಎಫ್) ಗುರುವಾರ ತಿಳಿಸಿದೆ.
ಚಾನು ನಿಷೇಧಿತ ಉದ್ದೀಪನಾ ಮದ್ದು ಟೆಸ್ಟೊಸ್ಟೆರೊನ್ ಸೇವಿಸಿರುವುದು ದೃಢಪಟ್ಟರೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಲಭಿಸಿರುವ ಚಿನ್ನದ ಪದಕವನ್ನು ಕಳೆದುಕೊಳ್ಳಲಿದ್ದಾರೆ. ಚಾನು ಗೋಲ್ಡ್‌ಕೋಸ್ಟ್ ಸಿಟಿಯಲ್ಲಿ ನಡೆದಿದ್ದ ಮಹಿಳೆಯರ 53 ಕೆಜಿ ತೂಕ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು.
ಸಂಜಿತಾ ಚಾನು ಅವರ ರಕ್ತ ಮಾದರಿಯಲ್ಲಿ ನಿಷೇಧಿತ ಉದ್ದೀಪನಾ ದ್ರವ್ಯ ಸೇವಿಸಿರುವ ಕುರಿತು ವ್ಯತಿರಿಕ್ತ ವಿಶ್ಲೇಷಣ ಅಂಶ ಪತ್ತೆಯಾಗಿದೆ ಎಂದು ಅಂತರ್‌ರಾಷ್ಟ್ರೀಯ ಫೆಡರೇಶನ್ ವರದಿಯಲ್ಲಿ ತಿಳಿಸಿದೆ. ಇದರ ಪರಿಣಾಮ ಅಥ್ಲೀಟ್ ಉದ್ದೀಪನಾ ಮದ್ದು ನಿಗ್ರಹ ಕಾನೂನು ಉಲ್ಲಂಘಿಸಿರುವ ಆರೋಪದಲ್ಲಿ ತಾತ್ಕಾಲಿಕವಾಗಿ ಅಮಾನತುಗೊಳ್ಳಬಹುದು ಎಂದು ಐಡಬ್ಲುಎಫ್ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಸಂಜಿತಾರ ಸ್ಯಾಂಪಲ್‌ನ್ನು ಸಂಗ್ರಹಿಸಿರುವ ದಿನಾಂಕ ಸಹಿತ ಯಾವುದೇ ವಿವರಗಳನ್ನು ಐಡಬ್ಲುಎಫ್ ನೀಡಿಲ್ಲ. ಪ್ರಕರಣ ಮುಕ್ತಾಯವಾಗುವ ತನಕ ಯಾವುದೇ ಹೇಳಿಕೆ ನೀಡದಿರಲು ನಿರ್ಧರಿಸಿದೆ.
ಚಾನು ತನ್ನ 20ನೇ ವಯಸ್ಸಿನಲ್ಲಿ 2014ರ ಗ್ಲಾಸ್ಗೊ ಗೇಮ್ಸ್ ನಲ್ಲಿ 48 ಕೆಜಿ ತೂಕ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. 2012ರಲ್ಲಿ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ್ದರು.







