ಸಿಇಟಿ ಇಂಜಿನಿಯರಿಂಗ್‌ನಲ್ಲಿ 2ನೇ ರ್ಯಾಂಕ್ ಗಳಿಸಿದ ನಾರಾಯಣ ಪೈಗೆ ಎನ್‌ಐಟಿಕೆಯಲ್ಲಿ ಇಂಜಿನಿಯರಿಂಗ್ ಮಾಡುವ ಗುರಿ

ಮಂಗಳೂರು, ಜೂ.1: ಸಿಇಟಿಯ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿ ನಾರಾಯಣ ಪೈ ಮುಂದೆ ಎನ್‌ಐಟಿಕೆಯಲ್ಲಿ ಇಂಜಿನಿಯರಿಂಗ್ ಅಧ್ಯಯನಕ್ಕೆ ನಿರ್ಧರಿಸಿದ್ದಾರೆ.
ಶಾರದಾ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿರುವ ನಾರಾಯಣ ಪೈ ಈಗಾಗಲೇ ಜೆಇಇ ಮೇನ್ ಪರೀಕ್ಷೆಯಲ್ಲೂ ಕಾಲೇಜಿಗೆ ಟಾಪರ್ ಆಗಿದ್ದು, ಎಂಐಟಿಯಲ್ಲಿ 4ನೆ ರ್ಯಾಂಕ್ ಪಡೆದಿದ್ದಾರೆ.
ಡೊಂಗರಕೇರಿ ನಿವಾಸಿ, ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯ ಡಿವಿಶನಲ್ ಮ್ಯಾನೇಜರ್ ಸುರೇಂದ್ರ ಪೈ ಹಾಗೂ ಗೃಹಿಣಿ ಸುಧಾ ಪೈ ದಂಪತಿಯ ಪುತ್ರನಾಗಿರುವ ನಾರಾಯಣ ಪೈ, 10ನೆವರೆಗೆ ಎಕ್ಕೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ. ಸಿಬಿಎಸ್‌ಇ 10ನೆ ತರಗತಿಯಲ್ಲೂ ನಾರಾಯಣ ಪೈ 10 ಸಿಜಿಪಿಇ ಅಂಕಗಳನ್ನು ಪಡೆದಿದ್ದರು.
‘ನನಗೆ ಭೌತಶಾಸ್ತ್ರದ ಬಗ್ಗೆ ಹೆಚ್ಚಿನ ಆಸಕ್ತಿ. ಉಳಿದಂತೆ ನಾನು ದಿನನಿತ್ಯದ ಪಾಠಗಳನ್ನು ಅಂದೇ ಓದುತ್ತಿದ್ದೆ. ಮುಂದೆ ಎನ್‌ಐಟಿಕೆಯಲ್ಲಿ ಇಂಜಿನಿಯರಿಂಗ್ ಅಧ್ಯಯನ ಮಾಡಲು ನಿರ್ಧರಿಸಿದ್ದೇನೆ’’ ಎಂದು ನಾರಾಯಣ ಪೈ ವಾರ್ತಾಭಾರತಿಗೆ ತಿಳಿಸಿದ್ದಾರೆ.
ತಾಯಿ ಸುಧಾ ಪೈ ಮಗನ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾ, ಆತ ಕಷ್ಟಪಟ್ಟು ಓದುತ್ತಿದ್ದ. ಹಾಗಾಗಿ ಒಳ್ಳೆಯ ಅಂಕ ಪಡೆಯುವ ನಿರೀಕ್ಷೆ ಇತ್ತು. ಇದೀಗ ದ್ವಿತೀಯ ರ್ಯಾಂಕ್ ಬಂದಿರುವುದು ನಮಗೆಲ್ಲಾ ಖುಷಿ ಕೊಟ್ಟಿದೆ’’ ಎಂದು ಹೇಳಿದ್ದಾರೆ.