ದನದ ವ್ಯಾಪಾರಿ ಹುಸೈನಬ್ಬ ಮೃತ್ಯು ಪ್ರಕರಣ: ಬಜರಂಗದಳದ ಮೂವರು ಕಾರ್ಯಕರ್ತರು ವಶ ?

ಹುಸೈನಬ್ಬ
ಹಿರಿಯಡ್ಕ, ಜೂ.1: ಪೆರ್ಡೂರಿನ ಸೀನಬೆಟ್ಟು ಎಂಬಲ್ಲಿ ಬಜರಂಗದಳದ ಕಾರ್ಯಕರ್ತರ ದಾಳಿ ವೇಳೆ ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ(62) ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ದಂತೆ ಮೂವರು ಬಜರಂಗದಳದ ಕಾರ್ಯಕರ್ತರನ್ನು ಉಡುಪಿ ಪೊಲೀಸರು ಬಳ್ಳಾರಿಯಲ್ಲಿ ವಶಕ್ಕೆ ತೆಗೆದುಕೊಂಡಿರುವ ಬಗ್ಗೆ ವರದಿಯಾಗಿದೆ.
ಪೆರ್ಡೂರು ಬಜರಂಗದಳದ ಮುಖಂಡ ಸುರೇಶ್ ಮೆಂಡನ್ ಯಾನೆ ಸೂರಿ, ಎಚ್.ಪ್ರಸಾದ್, ದೀಪಕ್ ಶೆಟ್ಟಿ ಎಂಬವರು ವಶಕ್ಕೆ ತೆಗೆದುಕೊಂಡ ಆರೋಪಿಗಳೆನ್ನಲಾಗಿದೆ. ಇವರಿಂದ ಪೊಲೀಸರು ಕಾರನ್ನು ಕೂಡ ವಶಕ್ಕೆ ತೆಗೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳನ್ನು ಬಳ್ಳಾರಿಯಿಂದ ಉಡುಪಿಗೆ ಕರೆದುಕೊಂಡು ಬರುತ್ತಿದ್ದು, ಇನ್ನಷ್ಟೆ ಅವರನ್ನು ಅಧಿಕೃತವಾಗಿ ಬಂಧಿಸಬೇಕಾಗಿದೆ. ಘಟನೆಯ ನಂತರ ಇವರು ತಲೆಮರೆಸಿಕೊಂಡು ಬಳ್ಳಾರಿಗೆ ಪರಾರಿಯಾಗಿದ್ದರು. ಖಚಿತ ಮಾಹಿತಿ ಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಳ್ಳಾರಿ ಪೊಲೀಸರ ಸಹಕಾರ ದೊಂದಿಗೆ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆನ್ನಲಾಗಿದೆ. ಅಲ್ಲದೆ ಸ್ಥಳೀಯವಾಗಿ ಹಲವು ಬಜರಂಗದಳದ ಕಾರ್ಯಕರ್ತರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸಂಬಂಧ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಠಿಕಾಣಿ ಹೂಡಿದ್ದು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಪ್ರಕರಣದ ತನಿಖಾಧಿಕಾರಿಯಾಗಿರುವ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ಇತರ ಅಧಿಕಾರಿಗಳು ಠಾಣೆಯಲ್ಲೇ ಹಾಜರಿದ್ದಾರೆ ಎಂದು ತಿಳಿದುಬಂದಿದೆ.
ಮಹಜರು ಪ್ರಕ್ರಿಯೆ: ಹುಸೈನಬ್ಬ ಅವರ ಮೃತದೇಹ ಪತ್ತೆಯಾದ ಸ್ಥಳಕ್ಕೆ ತೆರಳಿದ ಪೊಲೀಸರು ಇಂದು ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ತನಿಖೆಯನ್ನು ಮುಂದುವರೆಸಿರುವ ಪೊಲೀಸರು ಅಗತ್ಯ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
ಹುಸೈನಬ್ಬರ ಜೊತೆ ಇದ್ದ ಅವರ ಮಗ ಶಾಹೀದ್ ಹಾಗೂ ಜಾನುವಾರು ದಲ್ಲಾಳಿ ಜಯ ಎಂಬವರನ್ನು ಈ ಪ್ರಕರಣದಲ್ಲಿ ಸಾಕ್ಷಿಗಳನ್ನಾಗಿ ಮಾಡಲಾಗುತ್ತಿದೆ ಎಂಬ ಮಾಹಿತಿ ದೊರಕಿದೆ. ಒಟ್ಟಾರೆ ಈ ಎಲ್ಲ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನಾಳೆ ಪೊಲೀಸರು ಮಾಧ್ಯಮದ ಮುಂದೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೆರ್ಡೂರಿನ ಸೀನಬೆಟ್ಟು ಎಂಬಲ್ಲಿ ಮೇ 30ರಂದು ಬೆಳಗಿನ ಜಾವ 4ಗಂಟೆ ಸುಮಾರಿಗೆ ಬಜರಂಗದಳದ ಕಾರ್ಯಕರ್ತರ ಗುಂಪು ಪಿಕಪ್ ವಾಹನದಲ್ಲಿ ಬಂದು ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಸ್ಕಾರ್ಪಿಯೋ ವಾಹನವನ್ನು ಅಡ್ಡಗಟ್ಟಿ ಹುಸೈನಬ್ಬರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ಮೃತರ ಸಹೋದರ ಮುಹಮ್ಮದ್ ಇಸ್ಮಾಯಿಲ್ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕಲಂ: 143, 341, 147, 148, 427, 302, ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ ಎಸ್ಸೈಗೆ ಹಿರಿಯಡ್ಕ ಠಾಣೆ ಜವಾಬ್ದಾರಿ
ಹಿರಿಯಡಕ ಪೊಲೀಸ್ ಠಾಣೆ ಪ್ರಭಾರ ಉಪನಿರೀಕ್ಷಕರಾಗಿ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ರಫೀಕ್ ಅವರನ್ನು ನಿಯೋಜಿಸಲಾಗಿದೆ.
ಹಿರಿಯಡ್ಕ ಪೊಲೀಸ್ ಠಾಣಾ ಉಪನಿರೀಕ್ಷಕ ಡಿ.ಎನ್.ಕುಮಾರ್ ಅವರನ್ನು ಹುಸೈನಬ್ಬ ಪ್ರಕರಣದಲ್ಲಿ ಕರ್ತವ್ಯ ಲೋಪ, ಹಿರಿಯ ಅಧಿಕಾರಿಗಳ ಸಲಹೆ ಪಾಲಿಸದಿರುವುದು ಹಾಗೂ ನಿರ್ಲಕ್ಷ್ಯ ಎಸಗಿದ ಆರೋಪದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಮೇ 31ರಂದು ಅವಾನತು ಗೊಳಿಸಿ ಆದೇಶ ನೀಡಿದ್ದರು.







