ಮಂಗಳೂರು ವಿವಿಯಲ್ಲಿ ಪ್ರಸರಾಂಗ ವತಿಯಿಂದ ಪುಸ್ತಕ ಬಿಡುಗಡೆ ಸಮಾರಂಭ

ಕೊಣಾಜೆ, ಜೂ. 1: ಅಧ್ಯಯನ, ಸಂಶೋಧನೆಗಳ ಜೊತೆಗೆ ವಿಶ್ವವಿದ್ಯಾಲಯಗಳಲ್ಲಿ ಪ್ರಕಟಣಾಂಗವು ಬಲಗೊಳ್ಳುವುದರೊಂದಿಗೆ ಜ್ಞಾನ ಪ್ರಸಾರದ ಕಾರ್ಯ ಹೆಚ್ಚಬೇಕಿದ್ದು, ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಪ್ರಸಾರಾಂಗದ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಸಿಂಡಿಕೇಟ್ ಸಭಾಂಗಣದಲ್ಲಿ ಶುಕ್ರವಾರ ಪ್ರಸಾರಾಂಗದ ವತಿಯಿಂದ ನಡೆದ ಹತ್ತು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಳೆದ ಮೂರು ವರ್ಷಗಳಲ್ಲಿ ಮೂವತ್ತೈದು ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ಮಂಗಳೂರು ವಿವಿ ಪ್ರಸಾರಾಂಗವು ಪಠ್ಯ ಪುಸ್ತಕಗಳ ಪ್ರಕಟನೆ ಹಾಗೂ ಪ್ರಚಾರೋಪನ್ಯಾಸದ ಮೂಲಕ ಸಾರ್ವಜನಿಕರನ್ನು ತಲುಪುತ್ತಿದ್ದು ಇದರ ಮಾರಾಟ ವ್ಯವಸ್ಥೆಯನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಸಂಚಾರಿ ಗ್ರಂಥಾಲಯ ವಾಹನವನ್ನು ಸದ್ಯದಲ್ಲೇ ವ್ಯವಸ್ಥೆಗೊಳಿಸಲಾಗುವುದು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಕೃತಿ ಅವಲೋಕನವನ್ನು ಮಾಡಿದ ಹಿರಿಯ ವಿದ್ವಾಂಸರಾದ ಡಾ.ಪಾದೇಕಲ್ಲು ವಿಷ್ಣುಭಟ್ ಇವರು, ಪ್ರಸಾರಾಂಗವು ವಿಶ್ವವಿದ್ಯಾಲಯದ ವಿದ್ವಾಂಸರ ಜೊತೆಗೆ ನಾಡಿನ ಹಿರಿಯ ವಿದ್ವಾಂಸರ, ಚಿಂತಕರ ಕೃತಿಗಳನ್ನೂ ಪ್ರಕಟಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಸಂಶೋಧನೆಯ ಜೊತೆಗೆ ಸೃಜನಶೀಲ ಕೃತಿಗಳ ಪ್ರಕಟನೆಗೂ ಆದ್ಯತೆ ನೀಡಿರುವುದು ಅಭಿನಂದನೀಯ ಎಂದರು.
ಸಮಾರಂಭದಲ್ಲಿಶತಾವಧಾನಿ ಡಾ.ಆರ್.ಗಣೇಶ್ ಅವರ ‘ಹದನು ಹವಣು’, ಡಾ.ವಸನ್ತ ಭಾರಧ್ವಾಜ್ ಅವರ ‘ಪ್ರಸಂಗಾಭರಣ’, ಪ್ರೊ.ಕೇಶವ ಶರ್ಮ ಇವರ ಹಳೆಗನ್ನಡ ಸಾಂಸ್ಕೃತಿಕ ಪದಕೋಶ’, ಪೂರ್ಣಿಮ ಸುರೇಶ್ ಅವರ ‘ಅಕ್ಕನಂತೊಬ್ಬಳು ಅನುರಕ್ತೆ’, ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ‘ಯಕ್ಷಗಾನ ಪ್ರಸಂಗಗಳು’, ಪ್ರಾಧ್ಯಾಪಕಿ ಕಿಶೋರಿ ನಾಯಕ್ ಕೆ. ಇವರ ‘ಟ್ರಾನ್ಸ್‌ಪಾರ್ಮಿಂಗ್ ಹೈರಾರ್ಕಿಸ್ ಮಲ್ಟಿ ಕಲ್ಚರಲ್ ವುಮೆನ್ ರೈಟರ್ಸ್’, ಡಾ.ನಾಗಪ್ಪ ಗೌಡ ಕೆ. ಇವರ ‘ಆಧುನಿಕ ಕನ್ನಡ ಕಾದಂಬರಿಗಳ ಸಾಂಸ್ಕೃತಿಕ ಪಲ್ಲಟದ ಸ್ವರೂಪಗಳು’, ಡಾ. ವಸಂತ ಕುಮಾರ್ ಪೆರ್ಲ ಅವರು ಸಂಪಾದಿಸಿದ ಆಕಾಶವಾಣಿಯ ಆಯ್ದ ಚಿಂತನಗಳ ಸಂಕಲನ ‘ಚಿಂತನ’, ಡಾ.ಧನಂಜನಯ ಕುಂಬ್ಳೆ ಅವರ ಸಂಪಾದಕತ್ವದ ಪಳಕಳ ಸೀತಾರಾಮ ಭಟ್ಟ ಅವರ ಬಾಲಕಥಾಲೋಕ ಸಂಪುಟಗಳು ಬಿಡುಗಡೆಗೊಂಡಿತು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಬಿ.ಎಸ್.ನಾಗೇಂದ್ರ ಪ್ರಕಾಶ್ ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಲೇಖಕರನ್ನು ಹಾಗೂ ಪಳಕಳ ಸೀತಾರಾಮ ಭಟ್ಟರ ಮಗ ರಘುಪತಿ ಭಟ್ ಅವರನ್ನು ಪ್ರಸಾರಾಂಗದ ವತಿಯಿಂದ ಗೌರವಿಸಲಾಯಿತು.
ಪ್ರಸಾರಾಂಗದ ನಿರ್ದೇಶಕರಾದ ಪ್ರೊ.ಇಸ್ಮಾಯಿಲ್ ಬಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ.ವಸಂತ ಕುಮಾರ್ ಪೆರ್ಲ ಅವರು ಲೇಖಕರ ಪರವಾಗಿ ಮಾತನಾಡಿದರು. ಪ್ರಸಾರಾಂಗದ ಸಹಾಯಕ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮ ನಿರೂಪಿಸಿದರು.







