ನಿಪಾಹ್ ಭೀತಿ: ವೈದ್ಯರು,ನರ್ಸ್‌ಗಳಿಗೆ ರಜೆಯ ಮೇಲೆ ತೆರಳುವಂತೆ ಸೂಚನೆ

ಕೋಝಿಕ್ಕೋಡ್,ಜೂ.1: ಇಲ್ಲಿಗೆ ಸಮೀಪದ ಬಾಲುಶ್ಶೆರಿಯ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿ ಬಳಿಕ ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿಪಾಹ್ ವೈರಸ್ ಸೋಂಕಿತರಿಬ್ಬರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಾಲುಶ್ಶೆರಿ ಆಸ್ಪತ್ರೆಯ ನರ್ಸ್‌ಗಳು ಮತ್ತು ನಾಲ್ವರು ವೈದ್ಯರು ಸೇರಿದಂತೆ ಹಲವಾರು ಸಿಬ್ಬಂದಿಗಳಿಗೆ ಶುಕ್ರವಾರದಿಂದಲೇ ರಜೆಯ ಮೇಲೆ ತೆರಳುವಂತೆ ಸೂಚಿಸಲಾಗಿದೆ. ಮಾರಣಾಂತಿಕ ನಿಪಾಹ್ ವೈರಸ್ ಕೇರಳದ ಉತ್ತರದ ಜಿಲ್ಲೆಗಳಲ್ಲಿ ಈವರೆಗೆ 16 ಜೀವಗಳನ್ನು ಬಲಿ ತೆಗೆದುಕೊಂಡಿದೆ.
ಮೃತ ರೋಗಿಗಳು ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಅವರ ಸಂಪರ್ಕದಲ್ಲಿದ್ದ ನರ್ಸ್‌ಗಳು ಮತ್ತು ನಾಲ್ವರು ವೈದ್ಯರು ಸೇರಿದಂತೆ ಆರೋಗ್ಯ ಸಿಬ್ಬಂದಿಗಳನ್ನು ಒಂದು ವಾರದ ರಜೆಯಲ್ಲಿ ತೆರಳುವಂತೆ ಸೂಚಿಸಲಾಗಿದೆ ಎಂದು ಹಿರಿಯ ಆರೋಗ್ಯಾಧಿಕಾರಿಯೋರ್ವರು ತಿಳಿಸಿದರು.
ಆಸ್ಪತ್ರೆಯ ಕಾರ್ಯ ನಿರ್ವಹಣೆಗಾಗಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.
ಗುರುವಾರ ಸಾವನ್ನಪ್ಪಿದ ರೆಸಿನ್(25) ಮೊದಲು ಇನ್ನೋರ್ವ ನಿಪಾಹ್ ರೋಗಿ ನಿಖಿಲ್ ಚಿಕಿತ್ಸೆ ಪಡೆಯುತ್ತಿದ್ದ ಬಾಲುಶ್ಶೆರಿ ಆಸ್ಪತೆಗೆ ದಾಖಲಾಗಿದ್ದ.
ಸ್ಥಳೀಯ ಉದ್ಯೋಗ ವಿನಿಮಯ ಕೇಂದ್ರ ಸೇರಿದಂತೆ ವಿವಿಧ ಸಂಸ್ಥೆಗಳು ಸದ್ಯಕ್ಕೆ ಬಾಗಿಲೆಳೆದುಕೊಳ್ಳಲು ಅನುಮತಿ ಕೋರಿವೆ. ಜನರ ದಟ್ಟಣೆಯನ್ನು ತಡೆಯುವುದು ಇದರ ಉದ್ದೇಶವಾಗಿದೆ ಎಂದು ಅಧಿಕಾರಿ ತಿಳಿಸಿದರು.
ಕೋಝಿಕ್ಕೋಡ್ ಜಿಲ್ಲಾಧಿಕಾರಿ ಯು.ವಿ.ಜೋಸ್ ಅವರು ನಿಪಾಹ್ ವೈರಸ್‌ನ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಪರಿಸ್ಥಿತಿಯ ಬಗ್ಗೆ ಕೇರಳ ಉಚ್ಚ ನ್ಯಾಯಾಲಯಕ್ಕೆ ವರದಿಯೊಂದನ್ನು ಸಲ್ಲಿಸಲಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಅಧೀಕ್ಷಕರೋರ್ವರು ನಿಪಾಹ್‌ದಿಂದಾಗಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ನ್ಯಾಯಾಲಯದ ಕಲಾಪಗಳನ್ನು ಸ್ಥಗಿತಗೊಳಿಸುವಂತೆ ಜಿಲ್ಲಾ ವಕೀಲರ ಸಂಘವು ಜಿಲ್ಲಾಧಿಕಾರಿಗಳನ್ನು ಕೋರಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಶಾಲೆಗಳಿಗೆ ಮೇ 31ರವರೆಗೆ ನೀಡಲಾಗಿದ್ದ ಬೇಸಿಗೆ ರಜೆಯನ್ನು ಜೂ.4ರವರೆಗೆ ಮುಂದುವರಿಸಲಾಗಿದೆ.
ತನ್ಮಧ್ಯೆ ಮೇ 14ರಂದು ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಮೇ 18ರಂದು ಬಾಲುಶ್ಶೆರಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದವರು ತಕ್ಷಣ ರಾಜ್ಯ ನಿಪಾಹ್ ಘಟಕವನ್ನು ಸಂಪರ್ಕಿಸುವಂತೆ ರಾಜ್ಯ ಆರೋಗ್ಯಾಧಿಕಾರಿಗಳು ಸೂಚಿಸಿದ್ದಾರೆ.







