ಪ್ರಗತಿಪರವಾಗಿ ಚಿಂತಿಸುವ ವಿವಿಗಳಿಗೆ ದೇಶದ್ರೋಹಿ ಪಟ್ಟ, ಭಜನೆ ಮಾಡುವ ವಿವಿಗಳಿಗೆ ಪ್ರಶಂಸೆ: ಡಾ.ಎಲ್.ಹನುಮಂತಯ್ಯ

ಬೆಂಗಳೂರು, ಜೂ. 1: ಶ್ರೀರಾಮ, ಸೀತೆಯ ಭಜನೆಗಳನ್ನು ಮಾಡುವ ವಿಶ್ವವಿದ್ಯಾಲಯಗಳನ್ನು ಪ್ರಶಂಸೆಗೊಳಪಡಿಸಲಾಗುತ್ತಿದೆ. ಆದರೆ, ಪ್ರಗತಿಪರವಾಗಿ ಚಿಂತಿಸುವ ವಿವಿಗಳಿಗೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಇಂದಿಲ್ಲಿ ಹೇಳಿದರು.
ಶುಕ್ರವಾರ ನಗರದ ಸರಕಾರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಎಸ್ಸಿ-ಎಸ್ಟಿ ಅಧ್ಯಾಪಕರ ಸಂಘದ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮರಣದಂಡನೆ ಕುರಿತು ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ವಿಚಾರಣ ಸಂಕಿರಣ ನಡೆಸಲಾಗಿತ್ತು. ಆದರೆ, ಈ ವಿವಿಗೆ ದೇಶದ್ರೋಹಿಗಳ ತಾಣ ಎಂದು ಪಟ್ಟಕಟ್ಟಿದರು. ಅಲ್ಲದೆ, ಪ್ರಪಂಚದ 150 ದೇಶಗಳಲ್ಲಿ ಮರಣ ದಂಡನೆ ರದ್ದು ಮಾಡಲಾಗಿದೆ. ಇಂತಹ ಪ್ರಗತಿಪರ ವಿಚಾರಗಳ ಬಗ್ಗೆ ಮಾತನಾಡಿದರೆ ದೇಶದ್ರೋಹಿ ಎಂದು ಬಿಂಬಿಸುತ್ತಾರೆ. ಆದರೆ, ಶ್ರೀರಾಮ, ಸೀತೆಯ ಭಜನೆಗಳನ್ನು ಮಾಡುವ ವಿಶ್ವವಿದ್ಯಾಲಯಗಳನ್ನು ಪ್ರಶಂಸಿಸುತ್ತಾರೆ ಎಂದು ತಿಳಿಸಿದರು.
ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಪಕ್ಷವೊಂದರ ಪರವಾಗಿ ಪ್ರಚಾರ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಪ್ರಾಧ್ಯಾಪಕರನ್ನು ಅಮಾನತು ಮಾಡಲಾಗಿದೆ. ಇದನ್ನು ಖಂಡಿಸುತ್ತೇನೆ ಎಂದ ಅವರು, ಪ್ರಾಧ್ಯಾಪಕರಿಗೆ ರಾಜಕೀಯ ಪ್ರಜ್ಞೆಯ ಬಗ್ಗೆ ಪ್ರಶ್ನಿಸುವ ಸ್ವಾತಂತ್ರ ನೀಡಬೇಕು. ಅಲ್ಲದೆ, ಇನ್ನುಳಿದ ಪ್ರಾಧ್ಯಾಪಕರು, ಅಮಾನತು ಖಂಡಿಸಿಲ್ಲವೇಕೆ ಎಂದು ಪ್ರಶ್ನಿಸಿದರು.
ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕೃತವಾದರೆ, ಸರಕಾರಿ ಶಾಲೆಗಳನ್ನು ನಾವು ಉಳಿಸಿಕೊಳ್ಳಬೇಕು. ಜೊತೆಗೆ ಶಾಲಾ ಮಟ್ಟದಲ್ಲಿರುವ ಅಸಮಾನತೆ ಹೋಗಲಾಡಿಸಬಹುದು. ಅದೇ ರೀತಿ, ಪ್ರಾಧ್ಯಾಪಕರು ಸಾಮಾಜಿಕ ವಿಚಾರಗಳ ಬಗ್ಗೆ ಧ್ವನಿಗೂಡಿಸುವಂತಹ ವಾತಾವರಣ ನಿರ್ಮಾಣವಾಗಬೇಕು. ಇಲ್ಲದಿದ್ದಲ್ಲಿ, ನಮ್ಮ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಲಿದೆ ಎಂದು ಹನುಮಂತಯ್ಯ ಹೇಳಿದರು.
ಸ್ವಚ್ಛ ಭಾರತ ಕಸ ಮಾತ್ರಕ್ಕೆ ಸೀಮಿತವಲ್ಲ, ಬದಲಾಗಿ ಸಾಮಾಜಿಕ ಚಿಂತನೆಗಳಿಗೂ ಅನ್ವಯವಾಗಬೇಕು. ಮೊದಲು ನನ್ನ ಮನಸ್ಸಿಗೂ, ಆನಂತರ ಕುಟುಂಬ, ಬಳಿಕ ಈ ಸಮಾಜಕ್ಕೆ ಮುಟ್ಟಬೇಕು ಎಂದ ಅವರು, ನಮ್ಮಲ್ಲಿ ಯಾರು ಜಾತಿ ಬಿಟ್ಟು ಬಂದಿಲ್ಲ. ಇದಕ್ಕೆ ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶವೇ ಉತ್ತಮ ಉದಾಹರಣೆಯಾಗಿದ್ದು, ಯಾವ ಪಕ್ಷಕ್ಕೆ ವೋಟ್ ಹಾಕಿದ್ದೀರಿ ಎಂದು ಕೇಳಿದರೆ ಸಾಕು, ಅವರ ಜಾತಿ ತಿಳಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮಿ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಡಾ.ಎನ್.ಮಂಜುಳಾ, ಹೆಚ್ಚುವರಿ ನಿರ್ದೇಶಕ ಪ್ರೊ.ಎಸ್.ಮಲ್ಲೇಶ್ವರಪ್ಪ, ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ, ಸಂಘದ ಅಧ್ಯಕ್ಷ ಡಾ.ಕೆ.ಕೃಷ್ಣಪ್ಪ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
‘ಎಡಗಾಲಲ್ಲಿ ಒದ್ದು ಬನ್ನಿ’
‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನಿಷ್ಠರು, ಈ ಕೂಡಲೇ ಹಿಂದೂ ಧರ್ಮವನ್ನು ಎಡಗಾಲಲ್ಲಿ ಒದ್ದು ಬಂದು, ಬೌದ್ಧ ಧರ್ಮಕ್ಕೆ ಸೇರಬೇಕು’
-ಇಂದೂಧರ ಹೊನ್ನಾಪುರ, ಹಿರಿಯ ಪತ್ರಕರ್ತ







