ಬಿಹಾರ ಉಪಚುನಾವಣೆ ಸೋಲಿಗೆ ತೈಲ ಬೆಲೆ ಏರಿಕೆ ಕಾರಣ: ಜೆಡಿಯು

ಪಾಟ್ನ, ಜೂ.1: ಬಿಹಾರದಲ್ಲಿ ಆಡಳಿತಾರೂಢ ಜೆಡಿಯು ವಶದಲ್ಲಿದ್ದ ಜೊಕಿಹಟ್ ವಿಧಾನಸಭಾ ಕ್ಷೇತ್ರ ಆರ್‌ಜೆಡಿ ಪಾಲಾಗಲು ತೈಲ ಬೆಲೆ ಏರಿಕೆ ಕಾರಣ ಎಂದು ಜೆಡಿಯು ಪ್ರತಿಕ್ರಿಯಿಸಿದೆ.
ಜನತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಆಕ್ರೋಶಗೊಂಡಿದ್ದು, ಇದು ಉಪಚುನಾವಣೆಗಳಲ್ಲಿ ಜೆಡಿಯು ಮತ್ತು ಎನ್‌ಡಿಎ ಸೋಲಿಗೆ ಕಾರಣವಾಗಿದೆ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ತಿಳಿಸಿದ್ದಾರೆ. ತೈಲ ಬೆಲೆ ಏರಿಕೆ ಗ್ರಾಮೀಣ ಆರ್ಥಿಕತೆ ಹಾಗೂ ಜನಸಾಮಾನ್ಯರ ಮೇಲೆ ನೇರವಾಗಿ ಪ್ರಭಾವ ಬೀರುವ ಕಾರಣ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಬೆಲೆ ಏರಿಕೆಯನ್ನು ನಿಯಂತ್ರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಅಲ್ಲದೆ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಮಿತ್ರಪಕ್ಷಗಳ ಜೊತೆ ಚರ್ಚಿಸಬೇಕು ಎಂದವರು ಒತ್ತಾಯಿಸಿದ್ದಾರೆ.
ತೈಲ ಬೆಲೆ ಏರಿಕೆ ಒಂದು ಕೆಟ್ಟ ಸಂಕೇತವಾಗಿದ್ದು ಜನತೆಯ ಆಕ್ರೋಶ ಹೆಚ್ಚುತ್ತಿರುವುದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಬಿಜೆಪಿಯ ಮತ್ತೊಂದು ಮಿತ್ರಪಕ್ಷ ಲೋಕ ಜನತಾ ಪಕ್ಷ (ಎಲ್‌ಜೆಪಿ) ತಿಳಿಸಿದೆ. ತೈಲ ಬೆಲೆ ಏರಿಕೆಯನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಎಲ್‌ಜೆಪಿ ರಾಜ್ಯಾಧ್ಯಕ್ಷ ಪಶುಪತಿ ಕುಮಾರ್ ಪಾರಸ್ ಹೇಳಿದ್ದಾರೆ. ಪಾರಸ್ ಅವರು ನಿತೀಶ್ ಕುಮಾರ್ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾರೆ.





