‘‘ಸೀತೆ ಪ್ರನಾಳ ಶಿಶುವಾಗಿದ್ದಳು!’’
ಉ.ಪ್ರ.ಉಪ ಮುಖ್ಯಮಂತ್ರಿಯ ಹೊಸ ಶೋಧ

ಲಕ್ನೋ,ಜೂ.1: ಆಧುನಿಕ ವಿಜ್ಞಾನಕ್ಕೆ ಪ್ರಾಚೀನ ಭಾರತದ ಕೊಡುಗೆಗಳ ಬಗ್ಗೆ ಚಿತ್ರವಿಚಿತ್ರ ಹೇಳಿಕೆಗಳನ್ನು ನೀಡುತ್ತಿರುವ ಬಿಜೆಪಿ ನಾಯಕರ ಹವ್ಯಾಸ ಹೆಚ್ಚುತ್ತಿರುವಂತಿದೆ. ಇದೀಗ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ದಿನೇಶ ಶರ್ಮಾ ಅವರು,ರಾಮಾಯಣ ಕಾಲದಲ್ಲಿ ಪ್ರನಾಳ ಶಿಶು ತಂತ್ರಜ್ಞಾನವಿತ್ತು ಎನ್ನುವುದಕ್ಕೆ ಶ್ರೀರಾಮನ ಪತ್ನಿ ಸೀತೆ ನಿದರ್ಶನವಾಗಿದ್ದಾಳೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.
ಸೀತೆ ಜನಿಸಿದಾಗ ಪ್ರನಾಳ ಶಿಶುವಿನಂತಹ ತಂತ್ರಜ್ಞಾನ ಖಂಡಿತವಾಗಿಯೂ ಇದ್ದಿರಬೇಕು. ಮಹಾರಾಜ ಜನಕ ಹೊಲವನ್ನು ಊಳುತ್ತಿದಾಗ ಮಣ್ಣಿನ ಗಡಿಗೆಯಿಂದ ಮಗುವೊಂದು ಹೊರಬಂದಿತ್ತು ಮತ್ತು ಆ ಮಗುವೇ ಸೀತೆಯಾದಳು. ಪ್ರನಾಳ ಶಿಶುವಿನಂತಹ ತಂತ್ರಜ್ಞಾನ ಆಗಲೇ ಇತ್ತು ಎನ್ನುವುದು ಇದರ ಅರ್ಥ ಎಂದು ಶರ್ಮಾ ಹೇಳಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಮೂರು ದಿನಗಳ ಹಿಂದೆ ಹಿಂದಿ ಪತ್ರಿಕೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಶರ್ಮಾ ಈ ಸಂದರ್ಭದಲ್ಲಿ ಇನ್ನೊಂದು ಅಣಿಮುತ್ತನ್ನೂ ಉದುರಿಸಿದ್ದಾರೆ. ಮಹಾಭಾರತದ ಕಾಲದಲ್ಲೇ ಪತ್ರಿಕೋದ್ಯಮವು ಆರಂಭವಾಗಿತ್ತು. ಕುರುಕ್ಷೇತ್ರದಲ್ಲಿ ನಡೆಯುತ್ತಿದ್ದ ಯುದ್ಧವನ್ನು ದೊರೆ ಧೃತರಾಷ್ಟ್ರನಿಗೆ ಬಣ್ಣಿಸುತ್ತಿದ್ದ ಸಂಜಯ ಒಂದು ಬಗೆಯ ‘ನೇರ ಪ್ರಸಾರ’ವನ್ನು ಒದಗಿಸುತಿದ್ದ ಎಂದು ಅವರು ಹೇಳಿದ್ದರು.
ಇದಿಷ್ಟೇ ಅಲ್ಲ,ಪ್ರಾಚೀನ ಭಾರತದಲ್ಲಿ ‘ನಮ್ಮ ಗೂಗಲ್’ಆರಂಭವಾಗಿತ್ತು. ನಾರದ ಮುನಿಗಳು ಮೂರು ಬಾರಿ ‘ನಾರಾಯಣ’ ಎಂದು ಹೇಳುವ ಮೂಲಕ ಎಲ್ಲಿ ಬೇಕಾದರೂ ತಲುಪಲು ಸಮರ್ಥರಿದ್ದರು ಮತ್ತು ಸಂದೇಶಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ರವಾನಿಸುತ್ತಿದ್ದ ಎಂದೂ ಶರ್ಮಾ ಹೇಳಿದ್ದರು.







