ನೂರು ಮಿಲಿಯನ್ ಬಳಕೆದಾರರ ಗುರಿ ದಾಟಿದ ‘ಫೋನ್ ಪೇ ’: ಸಂಸ್ಥಾಪಕ ಸಮೀರ್ ನಿಗಮ್

ಬೆಂಗಳೂರು, ಜೂ. 1: ಭಾರತದಲ್ಲಿ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಡಿಜಿಟಲ್ ಹಣ ಪಾವತಿ ಸಂಸ್ಥೆಯಾದ ಫೋನ್ ಪೇ ಸಂಸ್ಥೆಯು 100 ಮಿಲಿಯನ್ ಬಳಕೆದಾರರ ಗುರಿ ದಾಟಿದೆ ಎಂದು ಸಂಸ್ಥೆಯ ಸಿಇಓ ಹಾಗೂ ಸಂಸ್ಥಾಪಕ ಸಮೀರ್ ನಿಗಮ್ ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ಫೋನ್ ಪೇ 20 ಶತಕೋಟಿ ವಾರ್ಷಿಕ ಟಿಪಿವಿ ರನ್ ರೇಟ್ ತಲುಪಿದ್ದು, ಇದು ವಹಿವಾಟು ಮೌಲ್ಯದ ವಿಷಯದಲ್ಲಿ ಅತಿದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದ್ದಾರೆ.
ಅತ್ಯುತ್ತಮ ಯುಪಿಐ ವ್ಯಾಪಾರಿ ಸಂಸ್ಥೆಗೆ ನೀಡಲಾಗುವ ಪ್ರತಿಷ್ಠಿತ ಎನ್ಪಿಸಿಐ ಅವಾರ್ಡ್-2018ನ್ನು ಫೋನ್ ಪೇ ಸಂಸ್ಥೆಯು ಇತ್ತೀಚೆಗೆ ಪಡೆದುಕೊಂಡಿದೆ. ಫೋನ್ ಪೇ ಮಾರುಕಟ್ಟೆಯಲ್ಲಿ ಶೇ.70ರಷ್ಟು ವಹಿವಾಟು ನಡೆಸುತ್ತಿದ್ದು, ಕ್ಷೇತ್ರದಲ್ಲಿ ಅತ್ಯಂತ ಮುಂಚೂಣಿಯಲ್ಲಿದೆ. ಎಪ್ರಿಲ್ 2018ರಲ್ಲಿ, ಸಂಸ್ಥೆಯು ಪ್ರತಿದಿನಕ್ಕೆ 2ಮಿಲಿಯನ್ ವಹಿವಾಟುಗಳ ಲೆಕ್ಕದಲ್ಲಿ ಸುಮಾರು 60 ಮಿಲಿಯನ್ ವಹಿವಾಟುಗಳನ್ನು ಕಂಡಿತು. ವರ್ಷದ ಅಂತ್ಯದೊಳಗೆ 5 ಮಿಲಿಯನ್ ವಹಿವಾಟುಗಳನ್ನು ತಲುಪುವ ಗುರಿಯನ್ನು ಹೊಂದಿದೆ ಎಂದು ಅವರು ವಿವರಿಸಿದ್ದಾರೆ.
ಈ ಮೈಲಿಗಲ್ಲು ಸಾಧಿಸಿದ ಈ ದಿನ ನಮಗೆ ಬಹಳ ಹೆಮ್ಮೆ ತಂದಿದೆ. ನಾವು ಕೇವಲ 21 ತಿಂಗಳುಗಳಲ್ಲಿ 100 ಮಿಲಿಯನ್ ಬಳಕೆದಾರರ ಗುರಿ ದಾಟಿದ್ದೇವೆ. ಭಾರತದ ಯಾವುದೇ ಸ್ಟಾರ್ಟ್ಅಪ್ ಸಂಸ್ಥೆ ಈ ವೇಗದಲ್ಲಿ ಈ ಹೆಗ್ಗುರಿ ಸಾಧಿಸಿರುವುದು ಇದೇ ಮೊದಲು. ಭಾರತೀಯ ಗ್ರಾಹಕರು ಈವರೆಗೆ ನಮ್ಮಲ್ಲಿ ಇಟ್ಟಿರುವ ವಿಶ್ವಾಸದಿಂದ ಅತ್ಯಂತ ಆನಂದಿತರಾಗಿದ್ದೇವೆ, ಮತ್ತು ನಮ್ಮ ಭವಿಷ್ಯದ ಕುರಿತು ಉತ್ಸುಕರಾಗಿದ್ದೇವೆ. ಮುಂದಿನ ತ್ರೈಮಾಸಿಕದಲ್ಲಿ ಫೋನ್ ಪೇ ಸುಮಾರು 1.5ಲಕ್ಷ ಸಾಧನಗಳನ್ನು ಸ್ಥಾಪಿಸಲು ಉದ್ದೇಶಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







