ಮಾದಾಪುರ ಗ್ರಾ.ಪಂ ಸದಸ್ಯನ ಮೇಲೆ ಹಲ್ಲೆ: ಕ್ರಮಕ್ಕೆ ಜೆಡಿಎಸ್ ಆಗ್ರಹ

ಮಡಿಕೇರಿ, ಜೂ.1: ಮಾದಾಪುರ ಗ್ರಾ.ಪಂ ಸದಸ್ಯ ಹಾಗೂ ಮೂವತ್ತೊಕ್ಲು ಗ್ರಾಮದ ಜೆಡಿಎಸ್ ಹೋಬಳಿ ಅಧ್ಯಕ್ಷರಾದ ಮುಕ್ಕಾಟಿರ ಬೆಳ್ಳಿಯಪ್ಪನವರ ಮೇಲೆ ಹಲ್ಲೆ ನಡೆದಿದ್ದು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತನ್ನ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಗೇಟ್ ವಾಲ್‍ನ್ನು ಅಳವಡಿಸುವ ಸಂದರ್ಭ ಪಂಚಾಯತ್ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಯಿತು. ಈ ವಿಚಾರದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಅನಾವಶ್ಯಕ ಮೂಗು ತೂರಿಸಿದ ಪರಿಣಾಮ ಗ್ರಾಮದ ಹಬ್ಬ ಆಚರಣೆ ಸಂದರ್ಭ ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಬೆಳ್ಯಪ್ಪ ಆರೋಪಿಸಿದ್ದಾರೆ.
ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಆಸ್ಪತ್ರೆಗೆ ತೆರಳಿ ಬೆಳ್ಳಿಯಪ್ಪ ಅವರ ಆರೋಗ್ಯ ವಿಚಾರಿಸಿದರು. ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್‍ರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಜೆಡಿಎಸ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಸೂರು ಸತೀಶ್ ಜೋಯಪ್ಪ, ಜೆಡಿಎಸ್ ಕ್ಷೇತ್ರಾಧ್ಯಕ್ಷ ಎಸ್.ಎಚ್.ಮತೀನ್, ವಿರಾಜಪೇಟೆ ನಗರಾಧ್ಯಕ್ಷ ಮಂಜುನಾಥ್, ಯುವ ಜನತಾದಳ ಅಧ್ಯಕ್ಷ ಅಮ್ಮಂಡ ವಿವೇಕ್ ಈ ಸಂದರ್ಭ ಹಾಜರಿದ್ದರು.







