ಸೀತೆಯನ್ನು ಅಪಹರಿಸಿದ್ದು ರಾಮನಂತೆ!
ಗುಜರಾತ್ 12ನೇ ತರಗತಿ ಪಠ್ಯಪುಸ್ತಕದಲ್ಲಿ ಯಡವಟ್ಟು

ಅಹ್ಮದಾಬಾದ್, ಜೂ.1: ಸೀತೆಯನ್ನು ಅಪಹರಿಸಿದುದು ಶ್ರೀರಾಮನಂತೆ, ಹಾಗೆಂದು ಗುಜರಾತ್‌ನ ಹನ್ನೆರಡನೆ ತರಗತಿಯ ಪಠ್ಯಪುಸ್ತಕದಲ್ಲಿ ಬರೆಯಲಾಗಿದೆ.ಗುಜರಾತ್‌ನ 12ನೆ ತರಗತಿಯ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗಾಗಿನ ಪಠ್ಯಪುಸ್ತಕದಲ್ಲಿ ಇಂತಹದ್ದೊಂದು ಯಡವಟ್ಟು ಸಂಭವಿಸಿದೆ.
ಸಂಸ್ಕೃತ ಪಠ್ಯದ ಇಂಗ್ಲೀಷ್ ಆವೃತ್ತಿಯಲ್ಲಿ ಆಗಿರುವ ಈ ಯಡವಟ್ಟು ಬೆಳಕಿಗೆ ಬಂದ ಬೆನ್ನಲ್ಲೇ ಗುಜರಾತ್ ರಾಜ್ಯ ಪಠ್ಯಪುಸ್ತಕ ಮಂಡಳಿ (ಜಿಎಸ್‌ಎಸ್‌ಟಿಬಿ) ಹೇಳಿಕೆಯೊಂದನ್ನು ನೀಡಿ, ಇದೊಂದು ಭಾಷಾಂತರದಲ್ಲಾದ ಪ್ರಮಾದವೆಂದು ಸ್ಪಷ್ಟೀಕರಣ ನೀಡಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಿದೆ.
ಸಂಸ್ಕೃತ ಕವಿ ಕಾಳಿದಾಸ ಬರೆದಿರುವ ರಘುವಂಶಂ ಕಾವ್ಯ ಬಗ್ಗೆ ವಿದ್ಯಾರ್ಥಿಗಳಿಗೆ ಮೂಲಭೂತ ತಿಳುವಳಿಕೆಯನ್ನು ಮೂಡಿಸುವ ಕುರಿತಾದ ಪಠ್ಯದಲ್ಲಿ ಸೀತೆಯನ್ನು ರಾಮನು ಅಪಹರಿಸಿದಾಗ, ಲಕ್ಷ್ಮಣನು ರಾಮನಿಗೆ ನೀಡುವ ಸಂದೇಶವು ಈ ಕಾವ್ಯದಲ್ಲಿ ಅತ್ಯಂತ ಹೃದಯಸ್ಪರ್ಶಿಯಾಗಿ ಮೂಡಿಬಂದಿದೆ ಎಂದು ಬರೆಯಲಾಗಿದೆ.
ಈ ಬಗ್ಗೆ ಜಿಎಸ್‌ಎಸ್‌ಟಿಬಿ ಅಧ್ಯಕ್ಷ ನಿತಿನ್ ಪೆತಾನಿ ಅವರು ಸ್ಪಷ್ಟೀಕರಣ ನೀಡಿ, ಈ ಪಠ್ಯದ ಭಾಷಾಂತರದ ಹೊಣೆ ವಹಿಸಲಾದ ಅನುವಾದಕರು ಹಾಗೂ ಪ್ರೂಫ್‌ರೀಡರ್‌ಗಳು, ‘ ತ್ಯಾಗ ’ಎಂಬ ಶಬ್ದವನ್ನು ಆಂಗ್ಲಭಾಷೆಗೆ ಅನುವಾದಿಸುವಾಗ, ಅಬಾಂಡನ್ಡ್ (ತ್ಯಜಿಸುವುದು) ಎಂದು ಬರೆಯುವ ಬದಲು ಅಬ್ಡಕ್ಟಡ್ (ಅಪಹರಿಸುವುದು)ಎಂದು ಬರೆದಿದ್ದಾರೆಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ ಇಲಾಖೆಯು ತನಿಖೆಗೆ ಆದೇಶಿಸಿದೆ. ಒಂದು ವೇಳೆ ತಪ್ಪಿತಸ್ಥರೆಂದು ಕಂಡುಬಂದಲ್ಲಿ, ಅನುವಾದ ಹಾಗೂ ಪ್ರೂಫ್‌ರೀಡಿಂಗ್‌ನ ಹೊಣೆವಹಿಸಲಾದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದೆಂದು ನಿತಿನ್ ತಿಳಿಸಿದ್ದಾರೆ.







