ಶಾಲೆಗಳಲ್ಲಿ ಮೊಬೈಲ್ ಬಳಕೆ ಶಿಕ್ಷಾರ್ಹ ಅಪರಾಧ
ಬೋಧನಾ ಸಮಯದಲ್ಲಿ ಶಿಕ್ಷಕರಿಗೆ ಮೊಬೈಲ್ ನಿಷೇಧ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.1: ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರು ಪಾಠ ಮಾಡುವ ಸಂದರ್ಭದಲ್ಲಿ ಮೊಬೈಲ್ ಬಳಕೆ ಮಾಡುವುದನ್ನು ನಿಷೇಧ ಮಾಡಿ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ.
ಮೊಬೈಲ್ ಬಳಕೆ ಮಾಡದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹೊರಡಿಸಿರುವ ಅಧಿಸೂಚನೆ ಅನ್ವಯ ಪಾಠ-ಪ್ರವಚನ ನಡೆಯುವ ಸಂದರ್ಭದಲ್ಲಿ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಮೊಬೈಲ್ ಬಳಕೆ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ತಿಳಿಸಿದೆ.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು(ಡಿಡಿಪಿಐ) ಕ್ಷೇತ್ರ ಶಿಕ್ಷಣಾಧಿಕಾರಿಗಳು(ಬಿಇಒ) ಪ್ರತಿಯೊಂದು ಶಾಲೆಗೂ ಜೂ.1 ರಿಂದ ಅನ್ವಯವಾಗುವಂತೆ ಸರಕಾರದ ಅಧಿಸೂಚನೆಯನ್ನು ಪಾಲಿಸಬೇಕು ಎಂದು ನಿರ್ದೇಶನ ನೀಡಿದೆ.
ರಾಜ್ಯ ಸರಕಾರದ ಆದೇಶವನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಡಿಡಿಪಿಐಗಳಿಗೆ ಬಿಇಒಗಳು ಶಿಫಾರಸ್ಸು ಮಾಡಲಾಗಿದೆ. ಶಿಕ್ಷಕರು ತಮ್ಮ ವಿರಾಮದ ಸಮಯದಲ್ಲಿ ಮೊಬೈಲ್ ಬಳಕೆ ಮಾಡಲು ಅವಕಾಶವಿದೆ. ಆದರೆ, ಬೋಧನಾ ಸಮಯದಲ್ಲಿ ಕರೆ ಮಾಡುವುದು, ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡುವುದನ್ನು ನಿರ್ಬಂಧ ಮಾಡಲಾಗಿದೆ.
ತರಗತಿಗಳಿಗೆ ಹಾಜರಾಗುವ ವೇಳೆ ಶಿಕ್ಷಕರು ಯಾವುದೇ ಕಾರಣಕ್ಕೂ ಮೊಬೈಲ್ ಒಳಗಡೆಗೆ ತರಬಾರದು. ಒಂದು ವೇಳೆ ಮೊಬೈಲ್ ತಂದರೆ, ಮುಖ್ಯೋಪಾಧ್ಯಾಯರ ಗಮನಕ್ಕೆ ತರುವುದು ಕಡ್ಡಾಯವಾಗಿರುತ್ತದೆ. ಅದನ್ನು ಸಿಬ್ಬಂದಿ ಕೊಠಡಿಯಲ್ಲಿ ಜಾಗೃತವಾಗಿ ಇಟ್ಟು ಹೋಗಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಕಾರಣಗಳೇನು: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ನಲ್ಲಿ ಹರಟೆ ಹೊಡೆಯುವುದು, ವಾಟ್ಸಾಪ್ ಬಳಕೆ ಮಾಡುವುದು ಸೇರಿದಂತೆ ಮೊಬೈಲ್ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಶಾಲಾಭಿವೃದ್ಧಿ ಉಸ್ತುವಾರಿ ಸಮಿತಿಯೂ ಸಾಕಷ್ಟು ಬಾರಿ ಶಿಕ್ಷಕರಿಗೆ ಮೊಬೈಲ್ ಬಳಕೆ ಮಾಡದಂತೆ ಸೂಚಿಸಿದ್ದರೂ, ಅದಕ್ಕೆ ಕಡಿವಾಣ ಬಿದ್ದಿರಲಿಲ್ಲ. ಹೀಗಾಗಿ, ಸರಕಾರ ಇದಕ್ಕೆ ಶಾಶ್ವತ ಕಡಿವಾಣ ಹಾಕುವ ಸಲುವಾಗಿ ಕಾನೂನನ್ನು ರೂಪಿಸಿದೆ. ತುರ್ತು ಸಂದರ್ಭದಲ್ಲಿ ಶಾಲಾ ಲ್ಯಾಂಡ್ಲೈನ್ ಬಳಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.







