ಬರಗಾಲ ಎದುರಿಸಲು ರೈತರಿಗೆ ‘ಹೈನುಗಾರಿಕೆ’ ಉತ್ತಮ ಸಾಧನ: ಶಾಸಕ ಅಮೃತ ದೇಸಾಯಿ

ಧಾರವಾಡ, ಜೂ.1: ಕಳೆದ ನಾಲ್ಕು ವರ್ಷಗಳ ಬರಗಾಲ ಪರಿಸ್ಥಿತಿಯನ್ನು ರೈತರು ಹೈನುಗಾರಿಕೆಯನ್ನು ಉತ್ತಮವಾಗಿ ಬಳಸಿಕೊಂಡು ಸಮರ್ಥವಾಗಿ ನಿಭಾಯಿಸಿದ್ದಾರೆ. ಹೈನು ಉದ್ಯಮ ಒಂದು ಉತ್ತಮ ಜೀವನೋಪಾಯ ಮಾರ್ಗವಾಗಿದೆ ಎಂದು ಶಾಸಕ ಅಮೃತ ದೇಸಾಯಿ ಹೇಳಿದ್ದಾರೆ.
ಶುಕ್ರವಾರ ನಗರದ ಆಲೂರು ವೆಂಕಟರಾವ್ ಭವನದಲ್ಲಿ ಧಾರವಾಡ, ಹಾವೇರಿ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟವು ಆಯೋಜಿಸಿದ್ದ ವಿಶ್ವ ಹಾಲು ದಿನಾಚರಣೆ-2018ರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಹಾಲು ಒಕ್ಕೂಟವು ರೈತರಿಗೆ ಕೃಷಿಯೊಂದಿಗೆ ಉತ್ತಮ ಜೀವನ ಸಾಗಿಸಲು ಅನುಕೂಲ ಕಲ್ಪಿಸಿದೆ. ಸರಿಯಾದ ಸಮಯಕ್ಕೆ ಹಾಲಿನ ಬಿಲ್ ನೀಡುವುದು, ಪಶು ಆಹಾರ, ಪಶು ವೈದ್ಯಕೀಯ ಸೌಲಭ್ಯ ಸೇರಿದಂತೆ ಅನೇಕ ಸೌಕರ್ಯಗಳನ್ನು ಕೆಎಂಎಫ್ ನೀಡುತ್ತಿದೆ. ನಿರುದ್ಯೋಗವನ್ನು ಹೋಗಲಾಡಿಸಲು ಹೈನುಗಾರಿಕೆಗೆ ಹೆಚ್ಚು, ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ಅಮೃತ ದೇಸಾಯಿ ತಿಳಿಸಿದರು.
ಹಾಲು ಒಕ್ಕೂಟದ ನಿರ್ದೇಶಕರಾದ ಗಂಗಪ್ಪ ಮೊರಬದ, ಶಂಕರಪ್ಪಮುಗದ, ಯಲ್ಲಪ್ಪದಾಸನಕೊಪ್ಪ, ಶೇಖರಣೆ ಮತ್ತು ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಎಸ್.ಎಸ್.ಆಲೂರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ಡಾ.ಎಸ್.ಎಂ.ಹಿರೇಮಠ ಸಭೆ ಉದ್ದೇಶಿಸಿ ಮಾತನಾಡಿದರು.
ಧಾರವಾಡ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ನೀಲಕಂಠಪ್ಪಅಸೂಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







