ಡಿ.1 ರಿಂದ ರಾಷ್ಟ್ರೀಯ ಕಿರು ಚಲನಚಿತ್ರ ಸ್ಪರ್ಧೆ: ಆಸಕ್ತರಿಂದ ಅರ್ಜಿ ಆಹ್ವಾನ
ಬೆಂಗಳೂರು, ಜೂ.1: ಇಂಡಿವುಡ್ ಟ್ಯಾಲೆಂಟ್ ಹಂಟ್ ನೇತೃತ್ವದಲ್ಲಿ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಡಿ.1ರಿಂದ 4ರವರೆಗೆ ರಾಷ್ಟ್ರೀಯ ಕಿರು ಚಲನಚಿತ್ರ ಸ್ಪರ್ಧೆಯನ್ನು ಏರ್ಪಡಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆ್ಯನ್‌ಸನ್, ಹತ್ತು ಶತಕೋಟಿ ಯುಎಸ್ ಡಾಲರ್ ಪ್ರಾಜೆಕ್ಟ್ ಇದಾಗಿದ್ದು, ಇಂಡಿವುಡ್ ಟ್ಯಾಲೆಂಟ್ ಹಂಟ್‌ನ ನಾಲ್ಕನೇ ಆವೃತ್ತಿಯು ಡಿ.1ರಿಂದ ಇಂಡಿವುಡ್ ಫಿಲ್ಮ್ ಕಾರ್ನಿವಲ್ ಭಾಗವಾಗಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಮಕ್ಕಳಿಂದ ವೃದ್ಧರವರೆಗೆ ಎಲ್ಲಾ ವಯಸ್ಸಿನವರಿಗೂ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸುವವರು ಜು.31ರೊಳಗೆ ಆನ್‌ಲೈನ್ ಮೂಲಕ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಆನ್‌ಲೈನ್‌ನಲ್ಲಿಯೇ 2 ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆದು ಅಂತಿಮ ಹಂತದ ಆಯ್ಕೆ ಹೈದರಾಬಾದ್‌ನಲ್ಲಿ ನಡೆಯಲಿದೆ. ಸಿನಿಮಾ, ಫ್ಯಾಷನ್, ಮ್ಯೂಸಿಕ್, ಡಾನ್ಸ್, ಆರ್ಟ್, ಫಿಲ್ಮ್ ಮೇಕಿಂಗ್ ಮುಂತಾದ 30 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದು ಹೇಳಿದರು.
ಇಂಡಿವುಡ್ ಟ್ಯಾಲೆಂಟ್ ಹಂಟ್ ಕಾರ್ಯಕ್ರಮಕ್ಕೆ ಸಿನಿಮಾ ನಟರು, ನಿರ್ಮಾಪಕರು, ನಿರ್ದೇಶಕರು ಭಾಗವಹಿಸಲಿದ್ದು, ಕರ್ನಾಟಕದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟ ರಮೇಶ್ ಅರವಿಂದ ಅವರನ್ನು ಆಯ್ಕೆ ಮಾಡಲಾಗಿದೆ. ವಿಶ್ವದಾದ್ಯಂತ ನಾನಾ ದೇಶಗಳಿಂದ ಪ್ರತಿಭೆಗಳು ಆಗಮಿಸುವರು. ಸುಮಾರು 20 ಸಾವಿರ ಮಂದಿ ಸ್ಪರ್ಧಿಗಳು ಆಗಮಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಾ.ರಾ. ಗೋವಿಂದು ಮಾತನಾಡಿ, ಯುವಜನತೆಯ ಪ್ರತಿಭೆಯನ್ನು ಗುರುತಿಸಲು ವೇದಿಕೆ ಕಲ್ಪಿಸಿರುವ ಈ ಸ್ಪರ್ಧೆಗೆ ಮಂಡಳಿ ಸಂಪೂರ್ಣ ಬೆಂಬಲ ನೀಡುತ್ತಿದ್ದು, ಚಿತ್ರೋದ್ಯಮದಲ್ಲಿ ಹೆಚ್ಚು ಅವಕಾಶಗಳನ್ನು ಕಲ್ಪಿಸಲು ನೆರವಾಗುತ್ತೇವೆ ಎಂದರು. ಇದೇ ವೇಳೆ ಸಾರಾ ಗೋವಿಂದು ಅವರನ್ನು ಸನ್ಮಾನಿಸಲಾಯಿತು.
ಹೆಚ್ಚಿನ ಮಾಹಿತಿ ಮತ್ತು ಹೆಸರು ನೋಂದಣಿಗೆ ಸಂಪರ್ಕಿಸವು ವೆಬ್‌ಸೈಟ್ www.indywoodtalenthunt.com ಗೆ ಭೇಟಿ ನೀಡಬಹುದಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಇಂಡಿವುಡ್ ಟಿವಿ ಕಾರ್ಯಕ್ರಮದ ಮುಖ್ಯಸ್ಥ ಮುಖೇಶ್ ಎಂ. ನಾಯರ್, ಯುವ ನಿರ್ದೇಶಕ ಬಿ.ಎಸ್. ಕೌಶಿಕ್, ಸ್ಟಾರ್ ಬುಕ್ ಮೀಡಿಯಾದ ಸಿಇಒ ಗೊಲ್ಲಕೃಷ್ಣ ಉಪಸ್ಥಿತರಿದ್ದರು.







