ಉಡುಪಿಯಲ್ಲಿ 2762 ಶಿಕ್ಷಕ, 8276 ಪದವೀಧರ ಮತದಾರರು
ಉಡುಪಿ, ಜೂ.1: ಜೂ.8ರಂದು ಕರ್ನಾಟಕ ವಿಧಾನಪರಿಷತ್‌ಗಾಗಿ ನಡೆಯುವ ಚುನಾವಣೆಯಲ್ಲಿ ನೈರುತ್ಯ ಶಿಕ್ಷಕ ಕ್ಷೇತ್ರದಲ್ಲಿ 2762 ಹಾಗೂ ನೈರುತ್ಯ ಪದವೀಧರರ ಕ್ಷೇತ್ರದಲ್ಲಿ 876 ಮತದಾರರಿದ್ದಾರೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.
ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಕ್ಯಾ.ಗಣೇಶ್ ಕಾರ್ಣಿಕ್ ಹಾಗೂ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ ಅವರೊಂದಿಗೆ ಕಡಿಯಾಳಿಯ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.
ಗಣೇಶ್ ಕಾರ್ಣಿಕ್ ಅವರು ಈಗಾಗಲೇ ಎರಡು ಬಾರಿ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಇದೀಗ ಮೂರನೇ ಬಾರಿ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರೆ, ಹಿರಿಯ ರಾಜಕಾರಣಿ ಆಯನೂರು ಮಂಜುನಾಥ್ ಮೊದಲ ಬಾರಿ ಸ್ಪರ್ಧೆ ಯಲ್ಲಿದ್ದಾರೆ ಎಂದರು.
ಈಗಾಗಲೇ ಕಾರ್ಯಕರ್ತರು ಜಿಲ್ಲೆಯ ಹೆಚ್ಚಿನ ಮತದಾರರನ್ನು ಭೇಟಿ ಯಾಗಿ, ಪರಿಚಯ ಪತ್ರವನ್ನು ನೀಡಿದ್ದಾರೆ. ಇಂದಿನಿಂದ ಎರಡು ದಿನ ಅಭ್ಯರ್ಥಿ ಗಳೊಂದಿಗೆ ತಾವು ಜಿಲ್ಲೆಯ ಮತದಾರರನ್ನು ಮುಖ:ತ ಭೇಟಿಯಾಗಿ ಮತ ಯಾಚಿಸುವುದಾಗಿ ಮಟ್ಟಾರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಆಯಾ ಕ್ಷೇತ್ರದ ಬಿಜೆಪಿ ಶಾಸಕರು ಜೊತೆಗಿರುತ್ತಾರೆ ಎಂದರು.
ಇಂದು ಉಡುಪಿ ಕ್ಷೇತ್ರದ ಮತದಾರರನ್ನು ಭೇಟಿ ಮಾಡಲಿದ್ದು, ನಾಳೆ ಬೆಳಗ್ಗೆ ಕಾರ್ಕಳ ಮತ್ತು ಕಾಪು, ಅಪರಾಹ್ನ ಕುಂದಾಪುರ ಮತ್ತು ಬೈಂದೂರು ಕ್ಷೇತ್ರದ ಮತದಾರರನ್ನು ಅಭ್ಯರ್ಥಿಗಳು ನೇರವಾಗಿ ಭೇಟಿಯಾಗಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 9 ಮತದಾನ ಕೇಂದ್ರಗಳಿವೆ ಎಂದರು.
ಉಡುಪಿ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿರುವ ಮತದಾರರ ಸಂಖ್ಯೆ ಹೀಗಿದೆ. ಬೈಂದೂರು: 134 (ಶಿಕ್ಷಕರು)-338 (ಪದವೀಧರರು), ಶಂಕರನಾರಾಯಣ: 146-405, ಕುಂದಾಪುರ: 267-700, ಬ್ರಹ್ಮಾವರ: 456-1378, ಮಣಿಪಾಲ: 478-1036, ಉಡುಪಿ: 533-1863, ಕಾಪು: 248-1395, ಅಜೆಕಾರು: 93-395, ಕಾರ್ಕಳ: 362-776, ಒಟ್ಟು: 2762-8276.
ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕ್ಯಾ.ಗಣೇಶ ಕಾರ್ಣಿಕ್ ಮಾತನಾಡಿ, ರಾಜ್ಯದಲ್ಲಿ ನೈರುತ್ಯ ಕ್ಷೇತ್ರದಲ್ಲಿ ಮಾತ್ರ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ಒಟ್ಟಿಗೆ ನಡೆಯುತ್ತಿದೆ. ರಾಜ್ಯ ದಲ್ಲಿ ಬಿಜೆಪಿಯ ಐದು ವರ್ಷಗಳ ಆಡಳಿತಾವಧಿಯಲ್ಲಿ ನಡೆದ ಸಾಧನೆಯ ಹಿನ್ನೆಲೆಯಲ್ಲಿ ತಾವು ಮತ ಯಾಚನೆ ನಡೆಸುವುದಾಗಿ ತಿಳಿಸಿದರು. ಶಿಕ್ಷಕರು ಪ್ರಥಮ ಪ್ರಾಶಸ್ತ್ಯದ ಮತಗಳನ್ನು ತಮಗೆ ನೀಡುವಂತೆ ವಿನಂತಿಸಿದರು.
ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ ಮಾತನಾಡಿ, ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 68,000 ಪದವೀಧರ ಮತದಾರರಿದ್ದು, ಬಿಜೆಪಿ ಪಕ್ಷದ ಪರವಾಗಿ ಎಲ್ಲಾ ಕಡೆಗಳಲ್ಲೂ ಅನುಕೂಲಕರ ವಾತಾವರಣ ಕಂಡುಬಂದಿದೆ ಎಂದರು. ಈ ಕ್ಷೇತ್ರ ವ್ಯಾಪ್ತಿಯಲ್ಲಿ ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 27 ಶಾಸಕರು ಆಯ್ಕೆಯಾಗಿದ್ದಾರೆ, ಅಲ್ಲದೇ ಐವರು ಎಂಎಲ್‌ಸಿಗಳು ಐವರು ಸಂಸದರು ಸಹ ಬಿಜೆಪಿಯವರಾಗಿದ್ದಾರೆ. ಇದು ತಮಗೆ ಅನುಕೂಲಕರವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರುಗಳಾದ ಕೋಟ ಶ್ರೀನಿವಾಸ ಪೂಜಾರಿ, ಲಾಲಾಜಿ ಮೆಂಡನ್, ದಿನಕರ ಬಾಬು, ಶ್ಯಾಮಲಾ ಕುಂದರ್, ಸುರೇಶ್ ನಾಯಕ್ ಕುಯಿಲಾಡಿ, ಮಹೇಶ್ ಠಾಕೂರ್, ಮನೋಹರ್ ಕುಂದರ್, ಪ್ರಭಾಕರ ಪೂಜಾರಿ, ಸಂಧ್ಯಾ ರವೆುಶ್ ಮುಂತಾದವರು ಉಪಸ್ಥಿತರಿದ್ದರು.







