ಬಿಸಿಯೂಟ ಸೌಲಭ್ಯಕ್ಕಾಗಿ ಶ್ರೀರಾಮ, ಶ್ರೀದೇವಿ ಶಾಲೆಗಳು ಬೇಡಿಕೆ: ಶಿಕ್ಷಣ ಇಲಾಖೆ ಅನುಮತಿ

ಸಾಂದರ್ಭಿಕ ಚಿತ್ರ
ಬಂಟ್ವಾಳ, ಜೂ. 1: ಕಲ್ಲಡ್ಕ ಶಾಲೆಯ ಬಿಸಿಯೂಟ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಮಗೂ ಬಿಸಿಯೂಟ ಸೌಲಭ್ಯ ಒದಗಿಸುವಂತೆ ಕಲ್ಲಡ್ಕದ ಶ್ರೀರಾಮ ಶಾಲೆ ಹಾಗೂ ಪುಣಚದ ಶ್ರೀದೇವಿ ಶಾಲೆಗಳು ಸರಕಾರಕ್ಕೆ ಬೇಡಿಕೆ ಸಲ್ಲಿಸಿದ್ದು, ಶಿಕ್ಷಣ ಇಲಾಖೆಯು ಇದಕ್ಕೆ ಅನುಮತಿ ನೀಡಿದೆ.
ಕಳೆದ ಶೈಕ್ಷಣಿಕ ಅವಧಿಯ ತನಕ ಕೊಲ್ಲೂರು ದೇವಸ್ಥಾನದಿಂದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಪುಣಚದ ಶ್ರೀದೇವಿ ವಿದ್ಯಾಸಂಸ್ಥೆಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆಂದು ಸಹಾಯಧನ ನೀಡಲಾಗುತ್ತಿತ್ತು. ಆದರೆ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನದಿಂದ ಮಧ್ಯಾಹ್ನದ ಬಿಸಿಯೂಟಕ್ಕೆ ನಗದು ರೂಪದಲ್ಲಿ ಎರಡು ಶಾಲೆಗಳಿಗೆ ಮಾತ್ರ ನೆರವು ಒದಗಿಸುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಿದ್ದರಾಮಯ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, ಬಳಿಕದ ಬೆಳವಣಿಗೆಯಲ್ಲಿ ಈ ಎರಡು ಶಾಲೆಗಳಿಗೆ ಕೊಲ್ಲೂರು ದೇವಸ್ಥಾನದಿಂದ ನೀಡಲಾಗುತ್ತಿದ್ದ ಮಧ್ಯಾಹ್ನದ ಬಿಸಿಯೂಟದ ಅನುದಾನವನ್ನು ಸ್ಥಗಿತಗೊಳಿಸಲಾಗಿತ್ತು.
ಇದಾದ ಬೆನ್ನಲ್ಲೇ ಕಲ್ಲಡ್ಕ ಶಾಲೆಯ ಅನ್ನ ಕಿತ್ತುಕೊಂಡ ಸರ್ಕಾರ ಎಂಬ ಆರೋಪದಡಿಯಲ್ಲಿ ರಾಜ್ಯದ ವಿವಿಧೆಡೆ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ರೈ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಕಲ್ಲಡ್ಕ ಹಾಗೂ ಪುಣಚ ಶಾಲೆಗಳು, ಅಲ್ಲಿನ ವಿದ್ಯಾರ್ಥಿಗಳು, ಪೋಷಕರು ಬಿ.ಸಿ.ರೋಡಿನಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದರು. ಈ ಸಂದರ್ಭ ಶ್ರೀರಾಮ ವಿದ್ಯಾಕೇಂದ್ರದ ಅನುದಾನಿತ ವಿಭಾಗಕ್ಕೆ ಸರ್ಕಾರದ ಅಕ್ಷರ ದಾಸೋಹದಡಿಯಲ್ಲಿ ಬಿಸಿಯೂಟ ಒದಗಿಸಲು ಅವಕಾಶವಿದ್ದು, ಈ ಕುರಿತಾಗಿ ಮನವಿ ಸಲ್ಲಿಸುವಂತೆ ಜಿ.ಪಂ .ಕಾರ್ಯ ನಿರ್ವಹಣಾಧಿಕಾರಿ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯವರು ಶಾಲಾ ಆಡಳಿತ ಮಂಡಳಿಗೆ ನಿರ್ದೇಶನ ನೀಡಿದ್ದರು.
ಆದರೆ ಈ ಸಂಧರ್ಭ "ಸರ್ಕಾರದ ಯಾವುದೇ ನೆರವು ಬೇಡ, ಮಕ್ಕಳ ಪೋಷಕರು, ದಾನಿಗಳು, ಶಿಕ್ಷಣ ಪ್ರೇಮಿಗಳ ನೆರವಿನಿಂದ ಮಕ್ಕಳಿಗೆ ಮಧ್ಯಾಹ್ನದ ಊಟ ಕೊಡುತ್ತೇವೆ ಎಂದು ಶಿಕ್ಷಣ ಇಲಾಖೆಯ ಅಕ್ಷರದಾಸೋಹದ ಬಗ್ಗೆ ನಿರಾಸಕ್ತಿ ತೋರಿದ್ದರು. ಈ ನಡುವೆ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಅನ್ನ ಕಸಿದ ಸರಕಾರ ಎಂದು ಸಚಿವ ರಮಾನಾಥ ರೈ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಹರಿಸಿತ್ತು. ಆದರೆ ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕಲ್ಲಡ್ಕ ಶ್ರೀ ರಾಮ ಹಾಗೂ ಪುಣಚ ಶ್ರೀದೇವಿ ವಿದ್ಯಾ ಸಂಸ್ಥೆಗಳು ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ಅಕ್ಷರ ದಾಸೋಹದ ಅಧಿಕಾರಿಗಳು ಅರ್ಜಿ ಸ್ವೀಕರಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಕ್ಷರ ದಾಸೋಹದ ಯೋಜನೆಯಡಿ ಸರಕಾರದ ಬಿಸಿಯೂಟ ಪಡೆಯುವಂತೆ ಅಕ್ಷರ ದಾಸೋಹದ ಅಧಿಕಾರಿಗಳು ಕಳೆದ ಅಗಸ್ಟ್ ನಲ್ಲಿ ಎರಡೂ ಶಾಲೆಗೆ ಅರ್ಜಿ ಸಲ್ಲಿಸಿದ್ದರು. ಅದರೆ, ಇದಕ್ಕೆ ಎರಡೂ ಶಾಲೆಗಳು ಯಾವುದೇ ಸ್ಪಂದನೆ ನೀಡದೇ ತಿರಸ್ಕರಿದ್ದವು. ಇದೀಗ ಕಲ್ಲಡ್ಕ ಶ್ರೀರಾಮ ಹಾಗೂ ಪುಣಚ ಶ್ರೀದೇವಿ ವಿದ್ಯಾ ಸಂಸ್ಥೆಗಳು ಬಿಸಿಯೂಟ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ಬಿಸಿಯೂಟಕ್ಕಾಗಿ ಈಗಾಗಲೇ ಅಕ್ಕಿ ಪೂರೈಕೆ ಮಾಡಲಾಗಿದೆ.
-ಶಿವಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ







