ಬೆಂಗಳೂರು ನಗರದಲ್ಲಿ ಮುಂದುವರಿದ ಮಳೆ
ರಸ್ತೆಗೆ ಉರುಳಿದ ಮರಗಳು, ವಾಹನ ಸವಾರರ ಪರದಾಟ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.1: ನಗರದಲ್ಲಿ ಸತತವಾಗಿ ಮುಂದುವರಿದಿರುವ ಮಳೆಯು ಶುಕ್ರವಾರವೂ ಮುಂದುವರಿದಿದ್ದು, ವಿವಿಧ ಸ್ಥಳಗಳಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗಿದೆ. ಆದರೆ, ಯಾವುದೇ ಆಸ್ತಿ-ಪಾಸ್ತಿಗೆ ಹಾನಿಯುಂಟಾಗಿಲ್ಲ.
ಬೆಂಗಳೂರು ನಗರದಲ್ಲಿ ಬೆಳಗ್ಗೆಯಿಂದ ಬಿಸಿಲ ಕಾವು ಹೆಚ್ಚಿತ್ತು. ಆದರೆ, ಸಂಜೆ ವೇಳೆಗೆ ಮೋಡಗಳು ಬದಲಾದಂತೆ ಕಾಣುತ್ತಿದ್ದವು. ಆದರೆ, ಸಂಜೆ 6 ಗಂಟೆಯ ಸಮಯದಲ್ಲಿ ಏಕಾಏಕಿ ಮಳೆ ಬಿದ್ದಿದ್ದು, ಹಲವಾರು ಸ್ಥಳಗಳಲ್ಲಿ ಮರಗಳು ರಸ್ತೆಗುರುಳಿವೆ. ತಗ್ಗುಪ್ರದೇಶದಲ್ಲಿ ನೀರು ನಿಂತಿದ್ದು ಸಾರ್ವಜನಿಕರು ಪರದಾಡುವಂತಾಯಿತು. ಮತ್ತೊಂದು ಕಡೆ ರಾಜಕಾಲುವೆಗಳು ಒಡೆದು ನೀರು ರಸ್ತೆಗೆ ನುಗ್ಗಿದ್ದು ಕಂಡು ಬಂದಿದೆ.
ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣ, ಟಿವಿ ಟವರ್, ಹೆಬ್ಬಾಳ, ಐಟಿಪಿಎಲ್ ಮುಖ್ಯರಸ್ತೆ, ಕೋರಮಂಗಲದ ಬಳಿ ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತಿದ್ದು, ನಾರಾಯಣಪುರ ಹಾಗೂ ಥಣಿಸಂದ್ರ ಮುಖ್ಯರಸ್ತೆಯ ವಾಹನ ಸಂಚಾರರು ಪರದಾಡುವಂತಾಯಿತು.
ಎಲ್ಲೆಲ್ಲಿ ಮಳೆಯಾಗಿದೆ: ಗಿರಿನಗರ, ಹನುಮಂತನಗರ, ಗವಿಪುರ ಗುಟ್ಟಹಳ್ಳಿ, ಕೆಂಪೇಗೌಡ ನಗರ, ಬನಶಂಕರಿ, ಹೆಬ್ಬಾಳ, ಜೆಪಿ ನಗರ, ಎಚ್ಎಸ್ಆರ್ ಲೇಔಟ್ ಸೇರಿದಂತೆ ನಗರದ ಅಲ್ಲಲ್ಲಿ ಮಳೆ ಸುರಿದಿದೆ. ಸಂಜೆ ಸಮಯದಲ್ಲಿ ಮಳೆ ಬಿದ್ದ ಪರಿಣಾಮ ನಗರದ ಕೆ.ಆರ್.ಮಾರುಕಟ್ಟೆ, ಚಾಮರಾಜಪೇಟೆ, ಕಾರ್ಪೋರೇಷನ್, ಮೆಜೆಸ್ಟಿಕ್, ಲಾಲ್ಬಾಗ್, ಕೋರಮಂಗಲ, ಯಲಹಂಕ, ಕೊಡಿಗೇಹಳ್ಳಿ, ನಾಗರಬಾವಿ, ಬೊಮ್ಮನಹಳ್ಳಿ, ಸೇರಿದಂತೆ ಹಲವಾರು ಸ್ಥಳಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು.
ದಕ್ಷಿಣ ಒಳನಾಡಿಗೆ ಮುಂಗಾರು ಆಗಮನವಾಗುತ್ತಿದ್ದಂತೆ, ಕೇಂದ್ರಭಾಗದಂತಿರುವ ಬೆಂಗಳೂರಿನಲ್ಲಿ ಮೊದಲ ದಿನವೇ ಸಾಕಷ್ಟು ಮಳೆಯಾಗಿದೆ. ಜೂನ್ ಮೊದಲ ವಾರದಲ್ಲಿ ಮಳೆ ಹೆಚ್ಚಾಗುವ ಸಂಭವವಿದೆ.
ಪ್ರತಿ ದಿನ ಸಂಜೆ ಅಲ್ಲಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವ ಮುಂಗಾರು ಹಾಗೂ ಮುಂಗಾರು ಮಾರುತಗಳು ನಗರದಲ್ಲಿ ಅತಿ ಹೆಚ್ಚು ಮಳೆಯನ್ನು ಸುರಿಸಲಿವೆ. ಮೇ ಅಂತ್ಯದವರೆಗೆ ನಗರದ ಕೇಂದ್ರಭಾಗದಲ್ಲಿ 283 ಮಿ.ಮೀ ಮಳೆ ಸುರಿದಿದೆ.
ನಗರದ ಕೇಂದ್ರಭಾಗದಲ್ಲಿ 1957ರ ಮೇನಲ್ಲಿ 287.1ಮಿ.ಮೀ ಮಳೆಯಾಗಿತ್ತು. ಇದನ್ನು ಸಾರ್ವಕಾಲಿಕ ದಾಖಲೆ ಎಂದು ಹವಾಮಾನ ಇಲಾಖೆಯು ಪರಿಗಣಿಸಿದೆ. ಈ ಬಾರಿ ಮೇನಲ್ಲಿ 283 ಮಿ.ಮೀ ಮಳೆ ಬಂದಿದ್ದು, ಸಾರ್ವಕಾಲಿಕ ದಾಖಲೆಗೆ ಹತ್ತಿರದಲ್ಲೇ ಇದೆ. ಈ ಬಾರಿಯ ಬೇಸಿಗೆ ದಿನಗಳು ಮಳೆಯಿಂದಲೇ ಆರಂಭವಾಗಿ, ಮಳೆಯಿಂದಲೇ ಮುಕ್ತಾಯಗೊಂಡಿದೆ.







