ಬೇನಾಮಿ ಆಸ್ತಿ, ವಹಿವಾಟಿನ ಬಗ್ಗೆ ಮಾಹಿತಿ ನೀಡಿ: 5 ಕೋಟಿ ರೂ. ತನಕ ಬಹುಮಾನ ಪಡೆಯಿರಿ!

ಹೊಸದಿಲ್ಲಿ,ಜೂ.1: ಯಾವುದೇ ಬೇನಾಮಿ ಆಸ್ತಿ ಹಾಗೂ ಅಕ್ರಮ ಅರ್ಥಿಕ ವ್ಯವಹಾರದ ಬಗ್ಗೆ ಆದಾಯ ತೆರಿಗೆ ಇಲಾಖೆಯೊಂದಿಗೆ ನಿರ್ದಿಷ್ಟ ಮಾಹಿತಿಯನ್ನು ಹಂಚಿಕೊಂಡಲ್ಲಿ ನೀವು 1 ಕೋಟಿ ರೂ.ವರೆಗೂ ಬಹುಮಾನ ಪಡೆಯಲು ನಿಮಗೆ ಅವಕಾಶವಿದೆ. ವಿದೇಶದಲ್ಲಿ ಕೂಡಿಹಾಕಲಾದ ಅಘೋಷಿತ ಕಪ್ಪುಹಣದ ಕುರಿತು ಸುಳಿವು ನೀಡಿದಲ್ಲಿ 5 ಕೋಟಿ ರೂ. ವರೆಗೂ ಬಹುಮಾನ ಪಡೆಯಬಹುದಾಗಿದೆ.
ಇದಕ್ಕಾಗಿ, ಭಾರತದಲ್ಲಿ ತೆರಿಗೆ ವಂಚನೆ ಹಾಗೂ ಅಕ್ರಮ ಅಸ್ತಿಗಳ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ನೀಡಿದವರಿಗೆ 50 ಲಕ್ಷ ರೂ.ವರೆಗೆ ಬಹುಮಾನವನ್ನು ನೀಡಲು ಆದಾಯ ತೆರಿಗೆ ಇಲಾಖೆಗೆ ಅವಕಾಶ ನೀಡುವ ಆದಾಯ ತೆರಿಗೆ ಮಾಹಿತಿದಾರರಿಗೆ ಬಹುಮಾನ ಯೋಜನೆಗೆ ತಿದ್ದುಪಡಿ ಮಾಡಲಾಗಿದೆ.
ಸಿಬಿಡಿಟಿ ಇಂದು ಬೇನಾಮಿ ವ್ಯವಹಾರಗಳ ಮಾಹಿತಿದಾರರ ಪ್ರಶಸ್ತಿ ಯೋಜನೆ -2018ಯನ್ನು ಇಂದು ಪ್ರಕಟಿಸಿದ್ದು, ಆ ಪ್ರಕಾರ 2016ರ ಬೇನಾಮಿ ವ್ಯವಹಾರಗಳ (ನಿಷೇಧ) ತಿದ್ಧುಪಡಿ ಕಾಯ್ಡೆಯಡಿ ವಿಚಾರಣೆಗೊಳಪಡುವ ಬೇನಾಮಿ ವ್ಯವಹಾರಗಳ ಬಗ್ಗೆ ವಿದೇಶಿಯರು ಸೇರಿದಂತೆ ಯಾವುದೇ ವ್ಯಕ್ತಿಯು ಜಂಟಿ ಅಥವಾ ಹೆಚ್ಚುವರಿ ಆಯುಕ್ತರಿಗೆ ಮಾಹಿತಿ ನೀಡಬಹುದಾಗಿದೆ. ಬೇನಾಮಿ ಆಸ್ತಿ ಹಾಗೂ ವ್ಯವಹಾರಗಳು, ಹಾಗೂ ಅವುಗಳಿಂದ ಲಾಭವನ್ನು ಸಂಪಾದಿಸುವ ಗುಪ್ತ ಹೂಡಿಕೆದಾರರು, ಫಲಾನುಭವಿ ಮಾಲಕರ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಜನರು ಮಾಹಿತಿ ನೀಡುವುದನ್ನು ಉತ್ತೇಜಿಸುವ ಉದ್ದೇಶವನ್ನು ಈ ಬಹುಮಾನ ಯೋಜನೆ ಹೊಂದಿದೆ.
ಈ ಎಲ್ಲಾ ಬಹುಮಾನ ಯೋಜನೆಗಳಲ್ಲಿಯೂ ಮಾಹಿತಿದಾರರ ಬಗ್ಗೆ ಸಂಪೂರ್ಣ ಗೌಪ್ಯತೆಯನ್ನು ವಹಿಸಲಾಗುವುದು ಹಾಗೂ ಅವರ ಗುರುತು ಹಾಗೂ ಪರಿಚಯವನ್ನು ಬಹಿರಂಗಪಡಿಸಲಾಗುವುದಿಲ್ಲವೆಂಮದು ಆದಾಯ ತೆರಿಗೆ ಇಲಾಖೆ ಭರವಸೆ ನೀಡಿದೆ.
ಕಪ್ಪುಹಣವನ್ನು ಬೇರೆಯವರ ಹೆಸರಿನಲ್ಲಿ ಆಸ್ತಿಗಳ ಮೇಲೆ ಹೂಡಿಕೆ ಮಾಡಲಾಗುತ್ತಿರುವ ಹಲವು ಪ್ರಕರಣಗಳು ಪತ್ತೆಯಾಗಿವೆಯೆಂದು ತೆರಿಗೆ ಇಲಾಖೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಕೇಂದ್ರ ಸರಕಾರವು 1988ರ ಸಾಲಿನ ಬೇನಾಮಿ ಆಸ್ತಿ ವ್ಯವಹಾರಗಳ ಕಾಯ್ದೆಯನ್ನು ಬಲಿಷ್ಠಗೊಳಿಸುವುದಕ್ಕಾಗಿ 2016ರಲ್ಲಿ ಅದಕ್ಕೆ ತಿದ್ದುಪಡಿ ತಂದು, ಬೇನಾಮಿ ವ್ಯವಹಾರ (ನಿಷೇಧ) ತಿದ್ದುಪಡಿ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿತ್ತು.







