ಆರ್‌ಎಲ್‌ಡಿಗೆ ಏಕೈಕ ಸಂಸದ ಸ್ಥಾನ ಗಳಿಸಿ ಕೊಟ್ಟ ಕೈರಾನಾ ಗೆಲುವು

ಲಕ್ನೋ.ಜೂ.1: ಉತ್ತರ ಪ್ರದೇಶದ ಕೈರಾನಾ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು 2019ರ ಸಾರ್ವತ್ರಿಕ ಚುನಾವಣೆಗಳ ಮುನ್ನ ಪ್ರತಿಪಕ್ಷಗಳ ಪಾಲಿಗೆ ಮಹತ್ವದ್ದಾಗಿದ್ದರೆ,ಅದು ಮೈತ್ರಿಕೂಟದ ಭಾಗವಾಗಿರುವ ಅಜಿತ ಸಿಂಗ್‌ರ ರಾಷ್ಟ್ರೀಯ ಲೋಕ ದಳ(ಆರ್‌ಎಲ್‌ಡಿ)ಕ್ಕೆ ಸುದೀರ್ಘ ವಿರಾಮದ ಬಳಿಕ ಸಂಸತ್ತಿನಲ್ಲಿ ಪ್ರವೇಶವನ್ನು ದೊರಕಿಸಿದೆ.
ಆರ್‌ಎಲ್‌ಡಿ ಅಭ್ಯರ್ಥಿ ತಬಸ್ಸುಮ್ ಹಸನ್ ಅವರು ಪ್ರತಿಪಕ್ಷಗಳ ಬೆಂಬಲದೊಂದಿಗೆ ಬಿಜೆಪಿಯ ಮೃಗಾಂಕಾ ಸಿಂಗ್ ಅವರನ್ನು ಭಾರೀ ಮತಗಳ ಅಂತರದಿಂದ ಪರಾಭವಗೊಳಿಸಿ ಪ್ರತಿಪಕ್ಷಗಳ ಮುಖಗಳಲ್ಲಿ ನಗುವನ್ನು ಅರಳಿಸಿದ್ದಾರೆ.
ಇದಕ್ಕೂ ಮುನ್ನ ಸಂಸತ್ತಿನಲ್ಲಿ ಆರ್‌ಎಲ್‌ಡಿ ಪ್ರಾತಿನಿಧ್ಯವನ್ನು ಹೊಂದಿರಲಿಲ್ಲ. ಉತ್ತರ ಪ್ರದೇಶದಲ್ಲಿಯ ಅದರ ಏಕೈಕ ಶಾಸಕ ಸಹೇಂದರ್ ಸಿಂಗ್ ಅವರು ಬಿಜೆಪಿಗೆ ಹಾರಿದ್ದರು. ಕೈರಾನಾ ಉಪ ಚುನಾವಣೆಯಲ್ಲಿನ ಗೆಲುವು ಆರ್‌ಎಲ್‌ಡಿಗೆ ಪುನರುಜ್ಜೀವನ ನೀಡಿರುವಂತಿದೆ. ತನಗೆ ಜಾಟ್ ಸಮುದಾಯದ ಬೆಂಬಲವಿದೆ ಎಂದು ಅದು ಹೇಳಿಕೊಳ್ಳುತ್ತಿದೆಯಾದರೂ ಇತ್ತೀಚಿನ ಚುನಾವಣೆಗಳಲ್ಲಿ ತನ್ನ ಖಾತೆ ತೆರೆಯಲು ವಿಫಲಗೊಂಡಿತ್ತು.
2014ರ ಲೋಕಸಭಾ ಚುನಾವಣೆಗಳಲ್ಲಿ ಆರ್‌ಎಲ್‌ಡಿಯ ಸಾಧನೆ ಎಷ್ಟು ಕಳಪೆಯಾಗಿತ್ತೆಂದರೆ ಉತ್ತರ ಪ್ರದೇಶದಲ್ಲಿ ಅದರ ಎಂಟು ಅಭ್ಯರ್ಥಿಗಳ ಪೈಕಿ ಆರು ಜನರು ಠೇವಣಿಗಳನ್ನು ಕಳೆದುಕೊಂಡಿದ್ದರು. ಅದು ರಾಜ್ಯದಲ್ಲಿ ಚಲಾವಣೆಯಾಗಿದ್ದ ಒಟ್ಟು ಮತಗಳ ಪೈಕಿ ಕೇವಲ ಶೇ.0.86ರಷ್ಟನ್ನು ಗಳಿಸಿತ್ತು.
2017ರ ಉ.ಪ್ರ.ವಿಧಾನಸಭಾ ಚುನಾವಣೆಯಲ್ಲಿಯೂ ಪಕ್ಷದ ಸಾಧನೆ ದಯನೀಯವಾಗಿತ್ತು. ಅದು 277 ಸ್ಥಾನಗಳಿಗೆ ಸ್ಪರ್ಧಿಸಿತ್ತಾದರೂ 266 ಅಭ್ಯರ್ಥಿಗಳು ತಮ್ಮ ಠೇವಣಿಗಳನ್ನು ಕಳೆದುಕೊಂಡಿದ್ದರು. ಒಬ್ಬರೇ ಅಭರ್ಥಿ ಗೆದ್ದಿದ್ದರಾದರೂ ಅವರೂ ಕಳೆದ ಎಪ್ರಿಲ್‌ನಲ್ಲಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.







