ಉಡುಪಿ ಜಿಲ್ಲಾ ಪೊಲೀಸರ ಕಾರ್ಯದಕ್ಷತೆಗೆ ಶಾಸಕ ಖಾದರ್ ಶ್ಲಾಘನೆ
ದನದ ವ್ಯಾಪಾರಿಯ ಶಂಕಾಸ್ಪದ ಮೃತ್ಯು ಪ್ರಕರಣ

ಮಂಗಳೂರು, ಜೂ. 1: ಉಡುಪಿ ಜಿಲ್ಲೆಯ ಪೆರ್ಡೂರಿನಲ್ಲಿ ನಡೆದ ದನದ ವ್ಯಾಪಾರಿ ಜೋಕಟ್ಟೆಯ ಹುಸೈನಬ್ಬ ಅವರ ಶಂಕಾಸ್ಪದ ಮೃತ್ಯು ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರಗತಿಯ ತನಿಖೆ ನಡೆಸಿದ ಪೊಲೀಸರ ಕಾರ್ಯದಕ್ಷತೆಯ ಬಗ್ಗೆ ಮಾಜಿ ಸಚಿವ ಹಾಗೂ ಶಾಸಕ ಯು.ಟಿ. ಖಾದರ್ ಶ್ಲಾಘಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕರ್ತವ್ಯ ಪಾಲಿಸುವಲ್ಲಿ ವಿಫಲರಾದ ಎಸ್ಸೈಯನ್ನು ಅಮಾನತು ಮಾಡಿದ್ದಲ್ಲದೆ ಶಂಕಾಸ್ಪದ ಸಾವಿನ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ಸಕಾಲದಲ್ಲಿ ಕ್ರಮ ಜರಗಿಸುವಲ್ಲಿ ಸಫಲರಾಗಿದ್ದಾರೆ. ಇದು ಪೊಲೀಸ್ ಇಲಾಖೆಯ ಮೇಲೆ ನಾಗರಿಕ ಸಮಾಜ ಹೆಚ್ಚು ವಿಶ್ವಾಸ ತಾಳುವಂತಾಗಿದೆ ಎಂದರು.
ಘಟನೆಯನ್ನು ಅತಿರೇಕಕ್ಕೆ ಒಯ್ಯದೆ ಸಕಾಲದಲ್ಲಿ ನಿಭಾಯಿಸುವಲ್ಲಿ ಮೃತರ ಕುಟುಂಬಸ್ಥರು ಮತ್ತು ಊರವರ ಪ್ರಶಂಸನಾರ್ಹ. ಇದು ಸಮಾಜಕ್ಕೆ ಉತ್ತಮ ಸಂದೇಶ ಸಾರಿದೆ ಎಂದು ಖಾದರ್ ತಿಳಿಸಿದ್ದಾರೆ.
ಇಂತಹ ಸೂಕ್ಷ್ಮ ವಿಷಯಕ್ಕೆ ಸಂಬಂಧಿಸಿ ವಿಘ್ನ ಸಂತೋಷಿಗಳು ಸುಳ್ಳು ಸುದ್ದಿ ಹಬ್ಬಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವುದು ಖಂಡನೀಯ. ಸುಳ್ಳು ಸುದ್ದಿ ಹಬ್ಬಿದ ಇಬ್ಬರನ್ನು ಮಂಗಳೂರು ಪೊಲೀಸ್ ಆಯುಕ್ತರು ಬಂಧಿಸಿದ್ದು ಶ್ಲಾಘನೀಯ. ಪೊಲೀಸರು ಸಕಾಲದಲ್ಲಿ ಇಂತಹ ಕಠಿಣ ನಿರ್ಧಾರ ತಾಳಿದರೆ ಸಮಾಜ ಘಾತುಕ ಶಕ್ತಿಗಳಿಗೆ ಕಡಿವಾಣ ಹಾಕಬಹುದು ಎಂದು ಖಾದರ್ ಅಭಿಪ್ರಾಯಪಟ್ಟಿದ್ದಾರೆ.







