ಮೈಸೂರು: ಮಾವು ಮತ್ತು ಹಲಸಿನ ಮೇಳ-2018 ಕ್ಕೆ ಚಾಲನೆ

ಮೈಸೂರು,ಜೂ.1: ರಾಜ್ಯದ ಪ್ರತಿಷ್ಠಿತ ಹಣ್ಣಿನ ಬೆಳೆಗಳಾದ ಮಾವು ಮತ್ತು ಹಲಸಿನ ಮೇಳ- 2018 ಕ್ಕೆ ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಾಲನೆ ನೀಡಲಾಯಿತು.
ಮೈಸೂರು ನಗರದ ಅರಮನೆ ಹತ್ತಿರ ಇರುವ ಕರ್ಜನ್ ಪಾರ್ಕ್ ಆವರಣದಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಮತ್ತು ತೋಟಗಾರಿಕೆ ಇಲಾಖೆ ಮೈಸೂರು ಇವರ ಸಹಯೋಗದಲ್ಲಿ ಜೂ.1 ರಿಂದ ಜೂ.5 ರವರೆಗೆ ಆಯೋಜಿಸಲಾಗಿರುವ ಮಾವು ಮತ್ತು ಹಲಸಿನ ಮೇಳವನ್ನು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಶುಕ್ರವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು 'ಇಲ್ಲಿ ವಿವಿಧ ಬಗೆಯ ಮಾವಿನ ಹಣ್ಣುಗಳಿವೆ. ರೈತರು ನೇರವಾಗಿ ಬಂದು ಇಲಾಖೆ ಮೂಲಕ ಮಾರಾಟ ಮಾಡುತ್ತಿದ್ದಾರೆ. ಯಾವುದೇ ಮಧ್ಯವರ್ತಿಗಳು ಇರುವುದಿಲ್ಲ. ಸಾರ್ವಜನಿಕರು ಬಂದು ಖರೀದಿ ಮಾಡಿ, ಒಳ್ಳೆಯ ರೀತಿಯಲ್ಲಿ ನೈಸರ್ಗಿಕವಾಗಿ ಹಣ್ಣಾಗಿರು ಮಾವುಗಳು ದೊರೆಯಲಿದ್ದು, ಯಾವುದೇ ಕೆಮಿಕಲ್ ಬಳಸದ ಮಾವಿನಹಣ್ಣುಗಳಿವೆ. ಮಾರ್ಕೆಟ್ ನಲ್ಲಿ ಸಿಗುವ ದರಕ್ಕಿಂತ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಹಣ್ಣು ಸಿಗುತ್ತಿದೆ. ರೈತರಿಗೂ ಕೂಡ ಆದಾಯ ಸಿಗಲಿದೆ. ಮೈಸೂರಿನ ನಾಗರೀಕರು ಬಂದು ಹಣ್ಣುಗಳನ್ನು ಖರೀದಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಬೆಂಗಳೂರು, ರಾಮನಗರ, ಚನ್ನಪಟ್ಟಣ, ಕೋಲಾರ, ಮೈಸೂರು ಸೇರಿದಂತೆ ಹಲವು ಕಡೆಗಳಿಂದ ಮಾವು ಬೆಳೆಗಾರರು ಆಗಮಿಸಿದ್ದು, ಸಾವಯವ ಕೃಷಿಯಲ್ಲಿ ಬೆಳೆದು ನೈಸರ್ಗಿಕವಾಗಿ ಮಾಡಿದ ಹಣ್ಣುಗಳನ್ನು ಮಾರಟಕ್ಕಿಡಲಾಗಿದೆ.
ಕೆಲವು ಗಂಟೆಗಳಲ್ಲಿ ಖಾಲಿಯಾದ ಮಾವು: ಬೆಳಿಗ್ಗೆ 11.30 ಗಂಟೆಗೆ ಉದ್ಘಾಟನೆ ಆಗುತ್ತಿದ್ದಂತೆಯೇ ಮಾವಿನ ಹಣ್ಣುಗಳನ್ನು ಕೊಳ್ಳಲು ಜನರು ಮುಗಿಬಿದ್ದರು.. ಸುಮಾರು 2 ಗಂಟೆಯೊಳಗೆ ಅಲ್ಲಿ ಹಾಕಲಾಗಿದ್ದ ಮಾವಿನ ಹಣ್ಣುಗಳು ಮಾರಾಟವಾದವು.
ನೈಸರ್ಗಿಕವಾಗಿ ಹಣ್ಣುಮಾಡಲಾಗಿದೆ: ನಾವು ಸಾವಯವ ಕೃಷಿಯಿಂದ ಮಾವು ಬೆಳೆದಿದ್ದು, ಯಾವುದೇ ಕೆಮಿಕಲ್ ಗೊಬ್ಬರ ಹಾಕಿಲ್ಲ. ತಾಜಾ ಹಸುವಿನ ಗೊಬ್ಬರವನ್ನಷ್ಟೇ ಹಾಕಿ ಬೆಳೆಯಲಾಗಿದೆ. ಜೊತೆಗೆ ಹಣ್ಣು ಮಾಗಿದ ನಂತರ ಕಿತ್ತು ಹುಲ್ಲು, ಮತ್ತು ಟಾರ್ಪಾಲ್ ಒಳಗೆ ಇಟ್ಟು ಹಣ್ಣು ಮಾಡಲಾಗಿದೆ. ಕೆಮಿಕಲ್ ಮಿಶ್ರಿತ ಪೌಡರ್‍ಗಳನ್ನು ಬಳಸಲಾಗಿಲ್ಲ, ಈ ಹಣ್ಣುಗಳು ತುಂಬಾ ರುಚಿ ಮತ್ತು ಆರೋಗ್ಯದಿಂದ ಕೂಡಿರುತ್ತದೆ ಎಂದು ರಾಮನಗರದ ಮಾವು ಬೆಳೆಗಾರ ಕಿರಣ್‍ಕುಮಾರ್ ಹೇಳಿದರು.
ವಿವಿಧ ಬಗೆಯ ಮಾವುಗಳಾದ ರಸಪುರಿ, ಬಾದಾಮಿ, ರತ್ನಗಿರಿ ಅಲ್ಫಾನ್ಸೋ, ಸೆಂಧೂರ, ಮಲಗೋವಾ, ತೋತಾಪುರಿ, ಮಲ್ಲಿಕಾ, ದಶೇರಿ,ರಾಮರಸ, ದಿಲ್ ಪಸಂದ್, ಜಹಂಗೀರಾ, ಸ್ವೀಟ್ ಯೋಗಿ, ಆಮ್ರಪಾಲಿ, ಪೆದ್ದರಸಂ, ಸೇಲಂ, ಆರ್ಕ ಅನಾನಲ್ ಸೇರಿದಂತೆ 15ಕ್ಕೂ ಅಧಿಕ ಜಾತಿಯ ಮಾವಿನ ಹಣ್ಣುಗಳು, ವಿವಿಧ ಜಾತಿಯ ಹಲಸಿನ ಹಣ್ಣುಗಳು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ.







