ಚಿಕ್ಕಮಗಳೂರು: ಗ್ರಾಮೀಣ ಅಂಚೆ ಇಲಾಖೆ ನೌಕರರಿಂದ ಕಡಲೇಕಾಯಿ, ಕಾಫಿ, ಟೀ ಮಾರಾಟ ಮಾಡಿ ಧರಣಿ

ಚಿಕ್ಕಮಗಳೂರು, ಜೂ.1: ಗ್ರಾಮೀಣ ಅಂಚೆ ಇಲಾಖೆ ನೌಕರರ ಸಮಸ್ಯೆಗಳ ಪರಿಹಾರಕ್ಕೆ ನೇಮಿಸಿದ್ದ ಕಮಲೇಶ್ಚಂದ್ರ ಸಮಿತಿಯು ಸರಕಾರಕ್ಕೆ ಸಲ್ಲಿಸಿದ್ದ ವರದಿ ಜಾರಿಗೆ ಆಗ್ರಹಿಸಿ ಕಳೆದ 10 ದಿನಗಳಿಂದ ನಗರದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಜಿಲ್ಲಾ ಗ್ರಾಮೀಣ ಅಂಚೆ ಸೇವಕರ ಸಂಘದ ಸದಸ್ಯರು ನಡೆಸುತ್ತಿರುವ ಹೋರಾಟಕ್ಕೆ ಕೇಂದ್ರ ಸರಕಾರ ಯಾವುದೇ ಸ್ಪಂದನೆ ಮಾಡಿಲ್ಲ ಎಂದು ಆರೋಪಿಸಿ ಶುಕ್ರವಾರ ಕಡಲೆಕಾಯಿ, ಕಾಫಿ, ಟೀ ಮಾರಾಟ ಮಾಡುವ ಮೂಲಕ ವಿನೂತನವಾಗಿ ಧರಣಿ ನಡೆಸಿದರು.
ನಗರದ ಪ್ರಧಾನ ಅಂಚೆ ಕಚೇರಿ ಸಮೀಪದ ಆಜಾದ್ ಪಾರ್ಕ್‍ನಲ್ಲಿ ಶುಕ್ರವಾರ ಸಮಾವಣೆಗೊಂಡ ಸಂಘದ ಸದಸ್ಯರು ತಳ್ಳುವಗಾಡಿಯಲ್ಲಿ ಕಡಲೆಕಾಯಿ, ಕಾಫಿ, ಟೀ ತಂದು ಕಡಲೇಕಾಯಿ, ಕಡಲೇಕಾಯಿ, ಕಾಫಿ, ಟಿ ಎಂದು ಸಾರ್ವಜನಿಕರ ಗಮನಸೆಳೆಯುತ್ತ ಮಾರಾಟ ಮಾಡುವ ಮೂಲಕ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಶೇಷಣ್ಣಗೌಡ, ದೇಶಾದ್ಯಾಂತ 2.65 ಲಕ್ಷ ಗ್ರಾಮೀಣ ಅಂಚೆ ಇಲಾಖೆ ನೌಕರರು ಯಾವುದೇ ರೀತಿಯ ಸೇವಾ ಭದ್ರತೆ ಇಲ್ಲದೇ 3ರಿಂದ 10 ಸಾವಿರದವರೆಗೆ ಅತೀ ಕಡಿಮೆ ಸಂಬಳ ಪಡೆದು 10 ರಿಂದ 12 ಗಂಟೆಗಳ ಕಾಲ ದುಡಿಯುತ್ತಿದ್ದಾರೆ. ಈ ನೌಕರರ ಬದುಕು ಅತ್ಯಂತ ಸಂಕಷ್ಟಮಯವಾಗಿದೆ. ಕೂಡಲೇ ಕೇಂದ್ರ ಸರಕಾರ ಗ್ರಾಮೀಣ ಅಂಚೆ ನೌಕರರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುವಂತೆ ದೇಶ ವ್ಯಾಪ್ತಿ ನಡೆಸುತ್ತಿರುವ ಚಳವಳಿಯ ಭಾಗವಾಗಿ ಚಿಕ್ಕಮಗಳೂರು ನಗರದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಚಳವಳಿ ನಡೆಸಲಾಗುತ್ತಿದೆ. ಚಳುವಳಿ ಆರಂಭಿಸಿ 10 ದಿನಗಳು ಕಳೆದರೂ ಕೇಂದ್ರ ಸರಕಾರ ನೌಕರರ ಯಾವ ಬೇಡಿಕೆಗೂ ಸ್ಪಂದಿಸಿಲ್ಲ. ಇದರಿಂದ ಬೇಸತ್ತು ಅಂಚೆ ಇಲಾಖೆ ನೌಕರಿಗಿಂತ ಕಡಲೇಕಾಯಿ ಮಾರುವುದೇ ಲೇಸು ಎಂಬಂತಾಗಿದೆ. ಈ ಕಾರಣಕ್ಕೆ ಸಾಂಕೇತಿಕವಾಗಿ ಈ ವಿನೂತನ ಪ್ರತಿಭಟನೆಗಿಳಿದಿದ್ದೇವೆ. ಕೇಂದ್ರ ಸರಕಾರ ಇದಕ್ಕೂ ಸ್ಪಂದಿಸದಿದ್ದಲ್ಲಿ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು.
ಸಂಘದ ಕಾರ್ಯದರ್ಶಿ ಜೋಸೆಫ್ ಭಾರೆಟ್ಟೋ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿದೆ. ಕೇಂದ್ರ ಸರಕಾರ ಬೆವರು ಸುರಿಸಿ ದುಡಿಯುವ ವರ್ಗದ ಹಿತ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಅಂಚೆ ಇಲಾಖೆಯ ನೌಕರರಿಗೆ ಅತೀ ಕಡಿಮೆ ಸಂಭಾವನೆ ನೀಡಿ ದುಡಿಸಿಕೊಂಡು ಕಾರ್ಮಿಕರನ್ನು ಶೋಷಿಸುತ್ತಿದೆ. ಕೇಂದ್ರ ಸರಕಾರ ಕಾರ್ಮಿಕರ ಶ್ರಮದ ಬಗ್ಗೆ ಅಸಡ್ಡೆ ತೋರುತ್ತಿದ್ದು, ಯಾವುದೇ ರೀತಿಯ ಸೇನಾ ಭದ್ರತೆ ಒದಗಿಸದೇ ಹೊಣೆಗೇಡಿತನ ಪ್ರದರ್ಶಿಸುತ್ತದೆ ಎಂದು ದೂರಿದರು.
ಚಳವಳಿಗೆ ಬೆಂಬಲ ಸೂಚಿಸಿ ಮಾತನಾಡಿದ ರೈತ ಸಂಘದ ಗುರುಶಾಂತಪ್ಪ, ಉದ್ಯೋಗ ಸೃಷ್ಟಿ, ಕೌಶಲ್ಯ ಅಭಿವೃದ್ಧಿ ಬಗ್ಗೆ ಭಾಷಣ ಬಿಗಿಯುವ ಪ್ರಧಾನಿ ಮೋದಿ ಅವರು ಸದ್ಯ ದುಡಿಯುತ್ತಿರುವ ಕಾರ್ಮಿಕರ ಬದುಕಿನ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಭಾರತೀಯ ಮಾನವೀಯ ಮೌಲ್ಯಗಳನ್ನು ಸದೃಢಗೊಳಿಸಲು ಅಂಚೆ ಸಂಸ್ಕೃತಿ ಅಪಾರ ಕೊಡುಗೆ ನೀಡಿದೆ. ಅಂಚೆ ಇಲಾಖೆಯನ್ನು ಬಲಪಡಿಸಲು ಅಲ್ಲಿನ ಗ್ರಾಮಾಂತರ ಪ್ರದೇಶಗಳಲ್ಲಿ ದುಡಿಯುತ್ತಿರುವ ಅಂಚೆ ನೌಕರರಿಗೆ ಮೂಲಭೂತ ಸೇವಾ ಸವಲತ್ತು ಒದಗಿಸುವುದು ಸರಕಾರಗಳ ಕರ್ತವ್ಯ. ಕಮಲೇಶ್ಚಂದ್ರ ವರದಿಯ ಜಾರಿಯಿಂದ ಅಂಚೆ ನೌಕರರ ಶೋಚನೀಯ ಬದುಕು ಕೊಂಚವಾದರೂ ಸುಧಾರಿಸಲಿದ್ದು, ಕೇಂದ್ರ ಸರಕಾರಕ್ಕೆ ಕಾರ್ಮಿಕರ ಬಗ್ಗೆ ಕಾಳಜಿ ಇದ್ದಲ್ಲಿ ಕೂಡಲೇ ಸಂಘದ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು.
ಅಂಚೆ ನೌಕರರ ಸಂಘದ ಪದಾಧಿಕಾರಿಗಳಾದ ಕೃಷ್ಣøರಾವ್, ನಿತಿನ್, ಮಿಥುನ್‍ಕುಮಾರ್, ರವಿಕುಮಾರ್, ವಿರೂಪಾಕ್ಷ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.







