ಮಡಿಕೇರಿ: ಅಂಗಡಿ ಮಳಿಗೆಗೆ ನುಗ್ಗಿದ ಬಸ್; ಯುವಕ ಮೃತ್ಯು

ಮಡಿಕೇರಿ ಜೂ.1: ಬ್ರೇಕ್ ವಿಫಲಗೊಂಡ ಖಾಸಗಿ ಬಸ್‍ವೊಂದು ಅಂಗಡಿ ಮಳಿಗೆಗೆ ನುಗ್ಗಿದ ಪರಿಣಾಮ ಯುವಕನೊಬ್ಬ ಮೃತಪಟ್ಟಿರುವ ಘಟನೆ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ.
ಸ್ಥಳೀಯ ಗುಂಡೂರಾವ್ ಬಡಾವಣೆಯ ನಿವಾಸಿ ಗೋಪಿ ಎಂಬುವವರ ಪುತ್ರ ರಾಜೇಶ್ (18) ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು ಬಸ್ ಚಾಲಕ ಮೋಹನ್ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರವಾಸಿ ಮಂದಿರದ ರಸ್ತೆಯಿಂದ ಮುಖ್ಯರಸ್ತೆಗೆ ಬರುತ್ತಿದ್ದ ಖಾಸಗಿ ಬಸ್ ಚಾಲಕನ ಹತೋಟಿ ತಪ್ಪಿ ಎದುರು ಭಾಗದಲ್ಲಿದ್ದ ಅಂಗಡಿ ಮಳಿಗೆಗೆ ನುಗ್ಗಿದೆ. ಢಿಕ್ಕಿಯಾದ ರಭಸಕ್ಕೆ ರಸ್ತೆ ಬದಿಯಲ್ಲಿ ತೆರಳುತ್ತಿದ್ದ ನಾಗರಿಕರು ತಪ್ಪಿಸಿಕೊಂಡಿದ್ದು, ರಾಜೇಶ್ ಬಸ್‍ಗೆ ಸಿಲುಕಿ ಮೃತಪಟ್ಟಿದ್ದಾನೆ. ಪಟ್ಟಣದ ಹಣ್ಣಿನ ಅಂಗಡಿಯಲ್ಲಿ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜೇಶ್ ಊಟಕ್ಕೆ ತೆರಳುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.
ಸ್ಥಳಕ್ಕೆ ವೃತ್ತ ನಿರೀಕ್ಷಕ ಕ್ಯಾತೆಗೌಡ, ಸಂಚಾರಿ ಠಾಣಾಧಿಕಾರಿ ನವೀನ್‍ಗೌಡ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಕುಶಾಲನಗರ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೃತ ಯುವಕನ ಕುಟುಂಬ ಸದಸ್ಯರು ಘಟನೆಗೆ ಆಕ್ರೋಷ ವ್ಯಕ್ತಪಡಿಸಿದ್ದು ಸಾವಿಗೆ ಕಾರಣವಾದ ಬಸ್‍ನ ಮಾಲೀಕ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದು ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದರು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದರು.





