ಈದ್ ಸಂದರ್ಭದಲ್ಲಿ ಭಾರತೀಯ ಚಿತ್ರಗಳ ನಿಷೇಧ ಒಂದು ವಾರಕ್ಕೆ ಇಳಿಸಿದ ಪಾಕ್

ಇಸ್ಲಾಮಾಬಾದ್, ಜೂ. 1: ಈದ್ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಬಿಡುಗಡೆಯಾಗುವ ಬಾಲಿವುಡ್ ಚಿತ್ರಗಳ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಅಲ್ಲಿನ ಸರಕಾರ ಸಡಿಲಗೊಳಿಸಿದೆ.
ಪಾಕಿಸ್ತಾನ ಸರಕಾರವು ತನ್ನ ಮೂಲ ಆದೇಶದಲ್ಲಿ ಎರಡು ವಾರಗಳ ಕಾಲ ಬಾಲಿವುಡ್ ಚಿತ್ರಗಳನ್ನು ಪ್ರದರ್ಶಿಸಬಾರದು ಎಂದು ಹೇಳಿತ್ತು. ಈಗ ಈ ಅವಧಿಯನ್ನು ಒಂದು ವಾರಕ್ಕೆ ಇಳಿಸಿದೆ.
ಸ್ಥಳೀಯ ಚಿತ್ರೋದ್ಯಮಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ಪಾಕಿಸ್ತಾನ ಸರಕಾರ ಈ ಕ್ರಮ ತೆಗೆದುಕೊಂಡಿದೆ. ಈದ್‌ನ ಎರಡು ದಿನಗಳ ಮೊದಲಿನಿಂದ ಹಿಡಿದು ಎರಡು ವಾರಗಳವರೆಗೆ ಭಾರತೀಯ ಸಿನೇಮಾಗಳನ್ನು ಪ್ರದರ್ಶಿಸಬಾರದು ಎಂಬುದಾಗಿ ಮೊದಲ ಆದೇಶ ತಿಳಿಸಿತ್ತು.
‘‘ಸ್ಥಳೀಯ ಚಿತ್ರೋದ್ಯಮ ಮತ್ತು ಪ್ರದರ್ಶನ ವ್ಯವಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು ಈದ್ ಉಲ್ ಫಿತರ್ ಮತ್ತು ಈದ್ ಉಲ್ ಅಝ ಹಬ್ಬಗಳ ಸಂದರ್ಭಗಳಲ್ಲಿ ಈದ್ ದಿನದಿಂದ ಆರಂಭಿಸಿ ಒಂದು ವಾರದವರೆಗೆ ಭಾರತೀಯ ಚಿತ್ರಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ’’ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪರವಾಗಿ ನೀಡಿದ ಹೇಳಿಕೆಯೊಂದರಲ್ಲಿ ಕೇಂದ್ರೀಯ ಚಿತ್ರ ಸೆನ್ಸರ್ ಮಂಡಳಿ ಅಧ್ಯಕ್ಷ ದನ್ಯಾಲ್ ಗಿಲಾನಿ ಹೇಳಿದ್ದಾರೆ.





