ನಾಲ್ವರು ಸಂಘಪರಿವಾರ ಕಾರ್ಯಕರ್ತರ ಬಂಧನ: ಕಾರು ವಶಕ್ಕೆ
ದನದ ವ್ಯಾಪಾರಿ ಅನುಮಾನಾಸ್ಪದ ಸಾವಿನ ಪ್ರಕರಣ

ಸುರೇಶ್ ಮೆಂಡನ್ ಯಾನೆ ಸೂರಿ, ಪ್ರಸಾದ್ ಕೊಂಡಾಡಿ
ಹಿರಿಯಡ್ಕ, ಜೂ.2: ಪೆರ್ಡೂರಿನ ಸೀನಬೆಟ್ಟು ಎಂಬಲ್ಲಿ ಬಜರಂಗದಳದ ಕಾರ್ಯಕರ್ತರ ದಾಳಿ ವೇಳೆ ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ (62) ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘಪರಿವಾರದ ನಾಲ್ವರು ಕಾರ್ಯಕರ್ತರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ವಿಶ್ವ ಹಿಂದು ಪರಿಷತ್ ಉಡುಪಿ ಗ್ರಾಮಾಂತರ ಸಂಚಾಲಕರಾಗಿದ್ದ ಪೆರ್ಡೂರು ಕಲ್ಪಂಡೆಯ ಸುರೇಶ್ ಮೆಂಡನ್ ಯಾನೆ ಸೂರಿ(43), ಬಜರಂಗದಳ ಕಾರ್ಯಕರ್ತರಾದ ಹಿರಿಯಡ್ಕ ಕೊಂಡಾಡಿ ಭಜನೆಕಟ್ಟೆ ಬಳಿಯ ಪ್ರಸಾದ್ ಎಚ್.ಮರಕಾಲ (30), ಪೆರ್ಡೂರು ಗೋರೆಲ್ನ ಉಮೇಶ್ ಶೆಟ್ಟಿ (28) ಹಾಗೂ ಬೊಮ್ಮರಬೆಟ್ಟು ಗ್ರಾಮದ ಪಾಪೂಜೆಯ ರತನ್ ಪೂಜಾರಿ (22) ಬಂಧಿತ ಆರೋಪಿಗಳು.
ಪ್ರಕರಣದ ಕುರಿತು ತನಿಖೆ ನಡೆಸಲು ವಿವಿಧ ಅಧಿಕಾರಿಗಳನ್ನೊಳಗೊಂಡ ಮೂರು ತಂಡಗಳನ್ನು ರಚಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬ.ನಿಂಬರಗಿ ತನಿಖೆಯನ್ನು ಚುರುಕುಗೊಳಿಸಿದ್ದರು. ಘಟನೆಯ ಬಳಿಕ ಸುರೇಶ್ ಮೆಂಡನ್, ಪ್ರಸಾದ್ ಹಾಗೂ ದೀಪಕ್ ಶೆಟ್ಟಿ ಎಂಬವರು ಬಳ್ಳಾರಿಯಲ್ಲಿ ತಲೆ ಮರೆಸಿಕೊಂಡಿದ್ದರು.
ಈ ಕುರಿತು ಒಂದು ಪೊಲೀಸ್ ತಂಡ ಖಚಿತ ಮಾಹಿತಿ ಮೇರೆಗೆ ಜೂ.1 ರಂದು ಬಳ್ಳಾರಿಗೆ ತೆರಳಿ ಸ್ಥಳೀಯ ಪೊಲೀಸರ ಸಹಾಯದಿಂದ ಪ್ರಕರಣದ ಪ್ರಮುಖ ಆರೋಪಿ ಸುರೇಶ್ ಮೆಂಡನ್, ಪ್ರಸಾದ್ ಕೊಂಡಾಡಿ ಹಾಗೂ ದೀಪಕ್ ಶೆಟ್ಟಿ ಹಾಗೂ ಅವರು ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಫ್ಟ್ ಕಾರನ್ನು ವಶಕ್ಕೆ ತೆಗೆದುಕೊಂಡಿತು. ಈ ಮೂವರ ವಿಚಾರಣೆ ನಡೆಸಿದ ಬಳಿಕ ಪೊಲೀಸರು ಸುರೇಶ್ ಮೆಂಡನ್ ಹಾಗೂ ಪ್ರಸಾದ್ನನ್ನು ಬಂಧಿಸಿದರು.
ಇನ್ನೊಂದು ತನಿಖಾ ತಂಡ ರತನ್ ಹಾಗೂ ಉಮೇಶ್ ಶೆಟ್ಟಿ ಅವರನ್ನು ಹಿರಿಯಡ್ಕದಲ್ಲಿ ಬಂಧಿಸಿದೆ. ಪ್ರಕರಣದ ತನಿಖಾಧಿಕಾರಿಯಾಗಿ ಕಾರ್ಕಳ ಸಹಾ ಯಕ ಪೊಲೀಸ್ ಅಧೀಕ್ಷಕ ಹೃಷಿಕೇಶ್ ಸೋನಾವಣೆಯನ್ನು ನೇಮಿಸಲಾಗಿದ್ದು, ಅವರ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳಿಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಸದ್ಯಕ್ಕೆ ಸ್ಕಾರ್ಪಿಯೋ ವಾಹನ ಜಖಂಗೊಳಿಸಿರುವುದು ಹಾಗೂ ದನ ಸಾಗಾಟಕಾರರಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಈ ನಾಲ್ವರನ್ನು ಬಂಧಿಸಲಾಗಿದೆ. ಹುಸೈನಬ್ಬ ಅವರನ್ನು ಕೊಲೆ ಮಾಡಲಾಗಿದೆಯೇ ಎಂಬುದು ಇನ್ನು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬರಬೇಕಾಗಿದೆ. ಇಂದು ಸಂಜೆ ಅಥವಾ ನಾಳೆ ಮರಣೋತ್ತರ ವರದಿ ನಮ್ಮ ಕೈ ಸೇರುವ ಸಾಧ್ಯತೆಗಳಿವೆ. ಪ್ರಕರಣದ ತನಿಖೆ ಮುಂದುವರೆಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಠಾಣಾಧಿಕಾರಿ ಸಮ್ಮುಖದಲ್ಲೇ ಕೊಲೆ: ದೂರು
ಹುಸೈನಬ್ಬ ಅವರನ್ನು ಬಜರಂಗದಳದ ಸೂರಿ ಹಾಗೂ ತಂಡದವರು ಹಿರಿಯಡ್ಕ ಠಾಣಾಧಿಕಾರಿ ಡಿ.ಎನ್.ಕುಮಾರ್ ಸಮ್ಮುಖದಲ್ಲೇ ಕೊಲೆ ಮಾಡಿ ರುವುದಾಗಿ ಮೃತರ ಸಹೋದರ ಮುಹಮ್ಮದ್ ಇಸ್ಮಾಯಿಲ್ ಹಿರಿಯಡ್ಕ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಪೆರ್ಡೂರಿನ ಸೀನಬೆಟ್ಟು ಎಂಬಲ್ಲಿ ಮೇ 30ರಂದು ಬಜರಂಗದಳದ ಕಾರ್ಯಕರ್ತರ ಗುಂಪು ವಾಹನದಲ್ಲಿ ಬಂದು ವ್ಯಾಪಾರಕ್ಕೆ ಸ್ಕಾರ್ಪಿಯೋ ವಾಹನದಲ್ಲಿ ಹೋದ ಹುಸೈನಬ್ಬರನ್ನು ಅಡ್ಡಗಟ್ಟಿ ಮಾರಣಾಂತಿಕವಾಗಿ ಥಳಿಸಿದ್ದರು. ಸ್ಕಾರ್ಪಿಯೋ ವಾಹನದಲ್ಲಿ ಇಬ್ಬರು ಜೀವ ಭಯದಿಂದ ಓಡಿ ಹೋದರು. ವಯಸ್ಸಾಗಿರುವ ಹುಸೈನಬ್ಬರಿಗೆ ಓಡಿ ಹೋಗಲು ಸಾಧ್ಯವಾಗದೆ ಗುಂಪಿನ ಕೈಗೆ ಸಿಕ್ಕಿ ಬಿದ್ದರು. ಗುಂಪು ಸ್ಕಾರ್ಪಿಯೋ ವಾಹನವನ್ನು ಸಂಪೂರ್ಣ ವಾಗಿ ಜಖಂಗೊಳಿಸಿತು. ಈ ಸಂದರ್ಭದಲ್ಲಿ ಪೊಲೀಸರ ವಾಹನ ಸ್ಥಳಕ್ಕೆ ಬಂದಿದ್ದು ಠಾಣಾಧಿಕಾರಿಯ ಸಮ್ಮುಖದಲ್ಲೇ ಹುಸೈನಬ್ಬ ಅವರನ್ನು ಕೊಲೆ ಮಾಡಲಾಗಿದೆ. ಈ ವಿಷಯವನ್ನು ಓಡಿ ಹೋದವರಲ್ಲಿ ಒಬ್ಬರು ಫೋನ್ ಮಾಡಿ ತಿಳಿಸಿದ್ದು, ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಇಸ್ಮಾಯಿಲ್ ದೂರಿನಲ್ಲಿ ತಿಳಿಸಿದ್ದಾರೆ.
ಜೂ.6ರವರೆಗೆ ನಾಲ್ವರು ಪೊಲೀಸ್ ಕಸ್ಟಡಿಗೆ
ಬಂಧಿತ ಆರೋಪಿಗಳಾದ ಸುರೇಶ್ ಮೆಂಡನ್, ಪ್ರಸಾದ್, ಉಮೇಶ್ ಶೆಟ್ಟಿ, ರತನ್ನನ್ನು ಪೊಲೀಸರು ಇಂದು ಸಂಜೆ ವೇಳೆ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಹೆಚ್ಚಿನ ತನಿಖೆಗಾಗಿ ನಾಲ್ವರನ್ನು ಕಸ್ಟಡಿಗೆ ನೀಡುವಂತೆ ಪೊಲೀಸರ ಮನವಿ ಮಾಡಿದ್ದು, ಅದರಂತೆ ನ್ಯಾಯಾಧೀಶರು ನಾಲ್ವರನ್ನು ಜೂ.6ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದರು. ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳನ್ನು ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದ್ದು, ಉಳಿದ ಆರೋಪಿಗಳ ಹಾಗೂ ಕೊಲೆಗೆ ಸಂಬಂಧಿಸಿದ ವಿಚಾರಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.







