ಡ್ರಗ್ಸ್ ಬದಲು ಚಿನ್ನ ಕಳ್ಳಸಾಗಣಿಕೆ ಮಾಡಿ ಎಂದು ಸಲಹೆ ನೀಡಿದ ಬಿಜೆಪಿ ಶಾಸಕ !

ಜೈಪುರ್,ಜೂ.2 : "ಚಿನ್ನ ಕಳ್ಳಸಾಗಣೆಯ ಅಪರಾಧಕ್ಕೆ ಜಾಮೀನು ದೊರೆಯುವುದರಿಂದ ಡ್ರಗ್ಸ್ ಬದಲು ಚಿನ್ನ ಕಳ್ಳಸಾಗಣೆ ಮಾಡಿ,'' ಎಂದು ರಾಜಸ್ಥಾನದ ಬಿಲಾರ ಕ್ಷೇತ್ರದ ಬಿಜೆಪಿ ಶಾಸಕ ಅರ್ಜುನ್ ಲಾಲ್ ಗರ್ಗ್ ಹೇಳಿದ್ದಾರೆ. ಅವರ ಈ ಭಾಷಣದ ವೀಡಿಯೋ ವೈರಲ್ ಆಗಿದೆ.
ಜೈತವಾಸ್ ಗ್ರಾಮದಲ್ಲಿ ದೇವಸ್ಥಾನವೊಂದರ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ದೇವಸಿ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಸಮುದಾಯವು ಜಾಮೀನುರಹಿತ ಅಪರಾಧವಾಗಿರುವ ಡ್ರಗ್ಸ್ ಕಳ್ಳ ಸಾಗಣಿಕೆಯಲ್ಲಿ ಬಿಷ್ಣೋಯಿ ಸಮುದಾಯದ ದಾಖಲೆಯನ್ನು ಮುರಿದಿದೆ ಎಂದಿದ್ದಾರೆ. ಮಾದಕವಸ್ತು ವ್ಯಸನದಿಂದ ದೂರವಿರುವಂತೆ ಯುವಜನತೆಗೆ ಕರೆ ನೀಡಿದ ಅವರು ದೇವಸಿ ಸಮುದಾಯದ ಹಲವು ಜನರು ಡ್ರಗ್ಸ್ ಕಳ್ಳಸಾಗಣಿಕೆಯಲ್ಲಿ ತೊಡಗಿ ಜೋಧಪುರ ಜೈಲಿನಲ್ಲಿರುವುದನ್ನು ಉಲ್ಲೇಖಿಸಿ "ಚಿನ್ನ ಹಾಗೂ ಡ್ರಗ್ಸ್ ಬೆಲೆ ಒಂದೇ ಆಗಿದೆ. ಆದರೆ ಚಿನ್ನದ ವ್ಯವಹಾರ ಸುರಕ್ಷಿತ,'' ಎಂದು ಹೇಳಿದರು. "ಯಾರಾದರೂ ಡ್ರಗ್ಸ್ ಬದಲು ಚಿನ್ನದ ಕಳ್ಳಸಾಗಣಿಕೆ ವೇಳೆ ಸಿಕ್ಕಿ ಬಿದ್ದರೆ ಅದು ಹೆಮ್ಮೆಯ ವಿಚಾರ,'' ಎಂದು ಅವರು ಹೇಳಿಕೊಂಡರು.
ಬಿಜೆಪಿ ಶಾಸಕನ ಹೇಳಿಕೆಯನ್ನು ರೈಕಾ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಖಂಡಿಸಿದ್ದಾರೆ. ಯಾವುದೇ ವಸ್ತುವಿನ ಕಳ್ಳಸಾಗಣೆ ಅಕ್ರಮವಾಗಿದೆ ಹಾಗೂ ಅನುಮತಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.





