ತುಳು ಸಿನೆಮಾ, ದೃಶ್ಯ ಮಾಧ್ಯಮಗಳಲ್ಲಿ ಅಶ್ಲೀಲ ಸಂಭಾಷಣೆ ವಿರೋಧಿಸಿ ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ

ಮಂಗಳೂರು, ಜೂ 2: ತುಳು ಸಿನೆಮಾಗಳಲ್ಲಿನ ಅಶ್ಲೀಲ ಸಂಭಾಷಣೆ ಸಹಿತ ದೃಶ್ಯ ಮಾಧ್ಯಮಗಳಲ್ಲಿ ಮಹಿಳೆಯರನ್ನು ತಪ್ಪು ದಾರಿಗೆಳೆಯುವ ದೃಶ್ಯ, ಸಂಭಾಷಣೆಗಳನ್ನು ವಿರೋಧಿಸಿ ಮಂಗಳೂರಿನ ವಿವಿಧ ಮಹಿಳಾ ಸಂಘಟನೆಗಳ ಸಹಭಾಗಿತ್ವದಲ್ಲಿ ಶನಿವಾರ ನಗರದ ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ಪ್ರತಿಭಟನಾ ರ್ಯಾಲಿ ನಡೆಯಿತು. ಬಳಿಕ ಮಹಿಳಾ ಸಂಘಟನೆಗಳ ನಿಯೋಗವೊಂದು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಈ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ಮನವಿ ಸಲ್ಲಿಸಿತು.
‘ಅಪ್ಪೆ’ ಎಂಬ ಹೆಸರಿನಿಂದ ಚಿತ್ರದಲ್ಲಿ ನಾಡಿನ ಮಾತೆಯರನ್ನು ಹಾಗೂ ಟೀಚರ್ ಎಂಬ ಹೆಸರಿನಿಂದ ಶಿಕ್ಷಕಿಯರನ್ನು ನಿಂದಿಸಲಾಗಿದೆ. ಅಲ್ಲದೆ ಅತ್ಯಾಚಾರ ಮಾಡಲು ಪ್ರಚೋದಿಸುವ ರೇಪ್‌ನ ಕೆಟ್ಟ ಸಂಭಾಷಣೆಯನ್ನು ಬಳಸಲಾಗಿದೆ. ಇದು ಮಹಿಳೆಯರ ಮೇಲಿನ ದೌರ್ಜನ್ಯವಾಗಿದೆ. ಅಷ್ಟೇ ಅಲ್ಲ ಈ ಸಿನೆಮಾವು ಪುರುಷರು ಹಾಗೂ ಮಹಿಳೆಯರು ಮುಜುಗರ ಪಡುವ ಸಂಭಾಷಣೆಗಳನ್ನು ಒಳಗೊಂಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಾಹಿತಿ ಚಂದ್ರಕಲಾ ನಂದಾವರ ಮಾತನಾಡಿ ನಾವು ಯಾವತ್ತೂ ಕೂಡ ಹಾಸ್ಯಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ, ಹಾಸ್ಯದ ಹೆಸರಿನಲ್ಲಿ ಅಸಹ್ಯ, ಅಪಹಾಸ್ಯ ಬೇಡ. ಈ ಚಿತ್ರದಲ್ಲಿ ಮಹಿಳೆಯರ ತೇಜೋವಧೆ ಮಾಡಲಾಗಿದೆ. ಸೆನ್ಸಾರ್ ಮಂಡಳಿಯಲ್ಲಿ ತುಳುವರಿದ್ದರೂ ಕೂಡ ಈ ಅಶ್ಲೀಲ ಸಂಭಾಷಣೆಗೆ ಕತ್ತರಿ ಪ್ರಯೋಗವಾಗದಿರುವುದು ವಿಪರ್ಯಾಸ ಎಂದರು.
ಪ್ರತಿಭಟನೆಯಲ್ಲಿ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಡೀಡ್ಸ್, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ, ಒಕ್ಕೂಟದ ಎಲ್ಲಾ ಮಹಿಳಾ ಮಂಡಲಗಳು, ಅಖಲಿ ಭಾರತ ಬಿಲ್ಲವ ಮಹಿಳಾ ಸಂಘ, ಸಹಕಾರ ಭಾರತಿ ಸಹಿತ ವಿವಿಧ ಸಂಘಟನೆಗಳು ಪಾಲ್ಗೊಂಡಿದ್ದವು.
ಪ್ರತಿಭಟನೆಯ ನೇತೃತ್ವವನ್ನು ಚಂಚಲಾ ತೇಜೋಮಯ, ಕೆ.ಎ. ರೋಹಿಣಿ, ಬಿ.ಎಂ.ರೋಹಿಣಿ, ತೇರಿ ಪಾಯಸ್, ಗುಲಾಬಿ ಬಿಳಿಮಲೆ, ಸುಖಲಾಕ್ಷಿ ಸುವರ್ಣ, ಸುಮನಾ ಶರಣ್, ಶಶಿಲೇಖಾ ವಹಿಸಿದ್ದರು.







