ಮೋದಿ ಭೇಟಿಯ ಸವಿನೆನಪಿಗಾಗಿ ಸಿಂಗಾಪುರ ಆರ್ಕಿಡ್ ಗೆ ಭಾರತದ ಪ್ರಧಾನಿಯ ಹೆಸರು

ಸಿಂಗಾಪುರ,ಜೂ.2 : ಭಾರತದ ಪ್ರಧಾನಿ ನರೇಂದ್ರ ಮೋದಿ ಸಿಂಗಾಪುರದ ಖ್ಯಾತ ನ್ಯಾಷನಲ್ ಆರ್ಕಿಡ್ ಗಾರ್ಡನ್ ಗೆ ಶನಿವಾರ ಭೇಟಿ ಕೊಟ್ಟಿರುವ ಸವಿನೆನಪಿಗಾಗಿ ಅಲ್ಲಿನ ಆರ್ಕಿಡ್ ಒಂದಕ್ಕೆ ಅವರ ಹೆಸರನ್ನಿಡಲಾಗಿದೆ. ಈ ಆರ್ಕಿಡ್ ಹೆಸರು ಡೆಂಡ್ರೊಬ್ರಿಯಂ ನರೇಂದ್ರ ಮೋದಿ ಎಂದಾಗಿದೆ ಎಂದು ವಿದೇಶಾಂಗ ವ್ಯಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. "ಪ್ರಧಾನಿಯ ಹೆಸರನ್ನಿಡಲಾದ ಆರ್ಕಿಡ್ ಸುಮಾರು 38 ಸೆಂಮೀ ಎತ್ತರಕ್ಕೆ ಬೆಳೆಯುತ್ತದೆ ಹಾಗೂ 14ರಿಂದ 20 ಹೂಗಳು ಅದರಲ್ಲಿರುತ್ತವೆ'' ಎಂದು ರವೀಶ್ ಬರೆದಿದ್ದಾರೆ.
ತಮ್ಮ ಮೂರು ದಿನಗಳ ಸಿಂಗಾಪುರ ಪ್ರವಾಸದ ಕೊನೆಯ ಹಂತದಲ್ಲಿರುವ ಪ್ರಧಾನಿ ನಂತರ ಚೈನಾಟೌನ್ ನಲ್ಲಿರುವ ಸಿಂಗಾಪುರದ ಅತ್ಯಂತ ಪುರಾತನ ಹಿಂದೂ ದೇವಳ ಶ್ರೀ ಮಾರಿಯಮ್ಮನ್ ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ದಕ್ಷಿಣ ಭಾರತದ ನಾಗಪಟ್ಟಣಂ ಹಾಗೂ ಕಡ್ಡಲೋರ್ ಜಿಲ್ಲೆಯ ವಲಸಿಗರು ಈ ದೇವಳವನ್ನು 1827ರಲ್ಲಿ ನಿರ್ಮಿಸಿದ್ದರು.
ಚೈನಾಟೌನ್ ನಲ್ಲಿರುವ ಚುಲಿಯಾ ಮಸೀದಿ ಹಾಗೂ ಬುದ್ಧಾ ಟೂತ್ ರೆಲಿಕ್ ಟೆಂಪಲ್ ಮತ್ತು ಮ್ಯೂಸಿಯಂಗೂ ಪ್ರಧಾನಿ ಭೇಟಿ ನೀಡಿದರು.







