ಕಷ್ಟದ ಸುಳಿಯಲ್ಲಿ ಬೀಡಿ ಕಾರ್ಮಿಕರು: ರಮಣಿ ಕಳವಳ
ಮೂಡುಬಿದಿರೆಯಲ್ಲಿ ಬೀಡಿ ಕಾರ್ಮಿಕರಿಂದ ಪ್ರತಿಭಟನೆ

ಮೂಡುಬಿದಿರೆ, ಜೂ.2: ರಾಜ್ಯ ಸರ್ಕಾರವು ಸಿ.ಐ.ಟಿ.ಯು ಸಂಘಟನೆಯು ಕಳೆದ ವರ್ಷ ನಡೆಸಿದ ತೀವ್ರ ಹೋರಾಟದ ಪರಿಣಾಮವಾಗಿ ಬೀಡಿ ಕಾರ್ಮಿಕರಿಗೆ ಸಾವಿರ ಬೀಡಿಗೆ 210 ರೂಪಾಯಿ ಕನಿಷ್ಟ ಕೂಲಿ, ಪ್ರತಿ ಪಾಯಿಂಟಿಗೆ 0.04 ಪೈಸೆಯಂತೆ 10.52 ಪೈಸೆ ತುಟ್ಟಿ ಭತ್ತೆ ಏರಿಕೆ ಮಾಡಿದ್ದು 2018ರ ಏಪ್ರಿಲ್ 1ರಿಂದ ಬೀಡಿ ಮಾಲೀಕರಿಗೆ ಇದನ್ನು ಒದಗಿಸಬೇಕಾಗಿತ್ತು. ಆದರೆ ಇದನ್ನು ಮಾತ್ರವಲ್ಲದೆ 2015 ತುಟ್ಟಿ ಭತ್ತೆಯನ್ನು ಕೂಡ ಸರ್ಕಾರ ಒದಗಿಸಿಲ್ಲ. ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಬೀಡಿ ಕಾರ್ಮಿಕರು ಕಷ್ಟದ ಸುಳಿಯಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ಜಿಲ್ಲಾ ಬೀಡಿ ಫೆಡರೇಶನ್ ಉಪಾಧ್ಯಕ್ಷ, ಸಿಐಟಿಯು ಮೂಡುಬಿದಿರೆ ವಲಯಾಧ್ಯಕ್ಷ ರಮಣಿ ಹೇಳಿದರು.
ಅರ್ಹರಿಗೆ ದಕ್ಕಬೇಕಾದ ಏರಿಕೆಯಾದ ವೇತನ ನೀಡಲು ಒತ್ತಾಯಿಸಿ ಸಿಐಟಿಯು ಮೂಡುಬಿದಿರೆ ವಲಯದ ಆಶ್ರಯದಲ್ಲಿ ಶನಿವಾರ ಸೌತ್ ಕೆನರಾ ಹೋಮ್ ಇಂಡಸ್ಟ್ರೀಸ್ ಡಿಪ್ಪೋ ಎದುರು ಬೀಡಿ ಕಾರ್ಮಿಕರು ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಬೀಡಿ ಫೆಡರೇಶನ್ ಉಪಾಧ್ಯಕ್ಷ ಸದಾಶಿವ ದಾಸ್, ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯಾದವ ಶೆಟ್ಟಿ, ಮೂಡುಬಿದಿರೆ ವಲಯ ಕಟ್ಟಡ ಕಾರ್ಮಿಕರ ಸಂಘದ ಕಾರ್ಯದರ್ಶಿ ಶಂಕರ್, ಸಿಐಟಿಯು ಮುಖಂಡರಾದ ರಾಧ, ಗಿರಿಜಾ, ಲಕ್ಷ್ಮೀ, ಬೇಬಿ ಉಪಸ್ಥಿತರಿದ್ದರು.
ಹಳೇ ಪೊಲೀಸ್ ಠಾಣೆಯ ಬಳಿಯಿರುವ ಸಿಐಟಿಯು ಕಚೇರಿಯಿಂದ ಮೂಡುಬಿದಿರೆ ಮುಖ್ಯರಸ್ತೆಯಲ್ಲಿ ಸಾಗಿ ಸೌತ್ ಕೆನರಾ ಹೋಮ್ ಇಂಡಸ್ಟ್ರೀಸ್ ಡಿಪ್ಪೋದವರೆಗೆ ಪ್ರತಿಭಟನಾ ಜಾಥಾ ನಡೆಯಿತು.







