ತುಮಕೂರು: ಅಲ್ಪಸಂಖ್ಯಾತರಿಗೆ ಹೆಚ್ಚಿನ ಸಚಿವ ಸ್ಥಾನಕ್ಕೆ ಮುಸ್ಲಿಂ ಮುಖಂಡರ ಮನವಿ

ತುಮಕೂರು,ಜೂ.02: ಸಮ್ಮಿಶ್ರ ಸರಕಾರದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹೆಚ್ಚು ಜನ ಮುಸ್ಲಿಂ ಜನಪ್ರತಿನಿಧಿಗಳಿಗೆ ಮಂತ್ರಿ ಪದವಿ ನೀಡಬೇಕೆಂದು ಕೆ.ಎಂ.ಸಿ.ಸಿ.ಕರ್ನಾಟಕ ಪದಾಧಿಕಾರಿಗಳು ಹಾಗೂ ಅಲ್ಪಸಂಖ್ಯಾತ ಮುಖಂಡರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರಿಗೆ ಶನಿವಾರ ಮನವಿ ಸಲ್ಲಿಸಿದರು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ತುಮಕೂರಿಗೆ ಆಗಮಿಸಿದ್ದ ವೇಳೆ ಕೆ.ಎಂ.ಸಿ.ಸಿ. ಕರ್ನಾಟಕದ ಪದಾಧಿಕಾರಿಗಳಾದ ಮುಸ್ತಾಕ್ ಅಹಮದ್, ಉಬೇದುಲ್ಲಾ ಷರಿಫ್, ರಹಮತ್ತುಲ್ಲಾ, ಅನ್ವರ್ ಪಾಷ, ಷರೀಫ್ ಅಹಮದ್, ಇಬ್ರಾಹಿಂ ಜೋಕಟ್ಟೆ, ಸೈಯದ್ ಮಕ್ಬೂಲ್ ಅಹಮದ್ ಶಿರಾ, ಅಬ್ದುಲ್ ರೆಹಮಾನ್, ಡಾ.ಖಾದರ್ ಬಾಷಾ ತುರುವೇಕೆರೆ ಮುಂತಾದವರು ದೇವೇಗೌಡರನ್ನು ಭೇಟಿಯಾಗಿ ಸಚಿವ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿ, ಮನವಿ ಪತ್ರ ಸಲ್ಲಿಸಿದರು.
ಜೆಡಿಎಸ್ ಪಕ್ಷದಿಂದ ವಿಧಾನಪರಿಷತ್ತಿನ ಬಿ.ಎಂ.ಫಾರೂಕ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಹೆಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಧನ್ಯವಾದ ಸಲ್ಲಿಸಿರುವ ಅಲ್ಪಸಂಖ್ಯಾತ ಮುಖಂಡರು, ರಾಜ್ಯ ಸಚಿವ ಸಂಪುಟದಲ್ಲಿ ಬಿ.ಎಂ.ಫಾರೂಕ್ ಜೊತೆ, ಮತ್ತೊಬ್ಬರಿಗೆ ಸಚಿವ ಸ್ಥಾನ ಕಲ್ಪಿಸುವಂತೆ ಮನವಿಯಲ್ಲಿ ಕೋರಿದ್ದಾರೆ.
ಈ ವೇಳೆ ಮಾತನಾಡಿದ ನಿಯೋಗದ ನೇತೃತ್ವ ವಹಿಸಿದ್ದ ಜೆಡಿಎಸ್ ರಾಜ್ಯ ಕಾರ್ಯದರ್ಶಿ ನವೀದ್ ಬೇಗ್, ಜೆಡಿಎಸ್ ಪಕ್ಷ ರಾಜ್ಯದಲ್ಲಿ ಪ್ಯಾಸಿಸ್ಟ್ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಪಕ್ಷದೊಂದಿಗೆ ಕೈಜೊಡಿಸಿ ಜಾತ್ಯಾತೀತ ಸರಕಾರ ನಿರ್ಮಾಣಕ್ಕೆ ಮುಂದಾಗಿರುವುದು ಅಲ್ಪಸಂಖ್ಯಾತರಿಗೆ ಹರ್ಷ ತಂದಿದೆ. ರಾಜ್ಯದಲ್ಲಿ ಮುಸ್ಲಿಂ ಸಮುದಾಯದವರಿಗೆ ಸರಕಾರಿ ನೌಕರಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸುವ ಮೂಲಕ ಸಮುದಾಯ ಅಭಿವೃದ್ದಿಗೆ ದೇವೇಗೌಡರು ಮತ್ತು ಜೆಡಿಎಸ್ ಪಕ್ಷದ ಮಾದರಿಯಾಗಿದ್ದು, ಜೆಡಿಎಸ್ ಪಕ್ಷ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲಿದೆ ಎಂಬ ನಂಬಿಕೆ ನಮಗಿದೆ ಎಂದು ತಿಳಿಸಿದರು.







