ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆಯ ಅಬ್ಬರ; ಕಳಸ-ಬಾಳೆಹೊನ್ನೂರು ರಸ್ತೆ ಸಂಪರ್ಕ ಕಡಿತ
ರಸ್ತೆ ಮೇಲೆಯೇ ಹರಿದ ನದಿ ನೀರು

ಚಿಕ್ಕಮಗಳೂರು, ಜೂ.2: ಕಾಫಿನಾಡಿನಲ್ಲಿ ಮುಂಗಾರು ಚುರುಕುಗೊಂಡಿದೆ. ಶನಿವಾರ ಮಧ್ಯಾಹ್ನ ಜಿಲ್ಲೆಯ ಮಲೆನಾಡು ತಾಲೂಕುಗಳಾದ ಶೃಂಗೇರಿ, ಎನ್.ಆರ್.ಪುರ ಹಾಗೂ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದೆ. ಬಾಳೆಹೊನ್ನೂರು ಸಮೀಪದ ಮಾಗುಂಡಿ ಬಳಿ ಸಣ್ಣ ಹಳ್ಳವೊಂದು ತುಂಬಿ ರಸ್ತೆ ಮೇಲೆ ಹರಿದ ಪರಿಣಾಮ ಸುಮಾರು 3 ತಾಸು ಕಳಸ- ಬಾಳೆಹೊನ್ನೂರು ಪಟ್ಟಣಗಳ ಸಂಪರ್ಕ ಕಡಿತಗೊಂಡಿತ್ತು.
ಜಿಲ್ಲೆಯಾದ್ಯಂತ ಮುಂಗಾರು ಪ್ರವೇಶಕ್ಕೂ ಮುನ್ನ ಮೇ ತಿಂಗಳ ಆರಂಭದಿಂದಲೇ ಧಾರಾಕಾರ ಮಳೆಯಾಗಿದ್ದು, ಮಲೆನಾಡಿನ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕು ಸೇರಿದಂತೆ ಬರದ ಬೇಗೆಗೆ ಬಸವಳಿದಿದ್ದ ಬಯಲು ಸೇಮೆ ತಾಲೂಕುಗಳಾದ ಕಡೂರು, ತರೀಕೆರೆಗಳಲ್ಲೂ ಈ ಬಾರಿ ಆರಂಭದಿಂದಲೇ ಉತ್ತಮ ಮಳೆಯಾಗಿದೆ. ಜೂ.1ರಂದು ಶುಕ್ರವಾರ ಜಿಲ್ಲೆಗೆ ಮುಂಗಾರು ಪ್ರವೇಶಿಸಿದ್ದು, ಜಿಲ್ಲೆಯ ಕೆಲ ಭಾಗಗಳಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರೆ, ಇನ್ನು ಕೆಲ ಭಾಗಗಳಲ್ಲಿ ಭಾರೀ ಮಳೆಯಾಗಿದೆ.
ಜಿಲ್ಲೆಯಲ್ಲಿ ಮಳೆಯ ನರ್ತನ ಶನಿವಾರವೂ ಮುಂದುವರಿದಿದ್ದು, ಚಿಕ್ಕಮಗಳೂರು ತಾಲೂಕಿನಾದ್ಯಂತ ಮುಂಜಾನೆಯಿಂದ ಮಧ್ಯಾಹ್ನದವರಗೆ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಮೂರರ ಹೊತ್ತಿನಲ್ಲಿ ಚಿಕ್ಕಮಗಳೂರು ಸೇರಿದಂತೆ ತಾಲೂಕಿನ ಕೆಲ ಭಾಗಗಳಲ್ಲಿ ಮಳೆಯಾಗಿದೆ. ಶನಿವಾರ ಮಧ್ಯಾಹ್ನ ಚಿಕ್ಕಮಗಳೂರು ತಾಲೂಕಿನಲ್ಲಿ ಸಾಧಾರಣ ಮಳೆಯಾಗಿದ್ದರೆ, ಕಡೂರು, ತರೀಕೆರೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮಳೆ ಹನಿ ಉದುರಿದ ಬಗ್ಗೆ ವರದಿಯಾಗಿದೆ.
ಇನ್ನು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು, ಮಾಗುಂಡಿ, ಮೂಡಿಗೆರೆ ತಾಲೂಕಿನ ಕಳಸ, ಕಗ್ಗನಳ್ಳ ಸುತ್ತಮುತ್ತ ಸುಮಾರು 1 ಗಂಟೆಗಳ ಕಾಲ ಧಾರಾಕಾರ ಮಳೆಯಾಗಿದೆ. ಇಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬಾಳೆಹೊನ್ನೂರು-ಕಳಸ ಪಟ್ಟಣ ಸಂಪರ್ಕ ರಸ್ತೆಯ ಮಾಗುಂಡಿ ಸಮೀಪದಲ್ಲಿ ಹರಿಯುವ ಹಳ್ಳವೊಂದು ತುಂಬಿ ರಸ್ತೆ ಮೇಲೆಯೇ ಹರಿದ ಪರಿಣಾಮ ರಸ್ತೆಯೇ ನೀರಿನಲ್ಲಿ ಮುಳುಗಡೆಯಾಗಿತ್ತು. ಇದರಿಂದಾಗಿ ಎರಡೂ ಕಡೆಗಳಲ್ಲಿ ಸುಮಾರು 1 ಕಿ.ಮೀ. ಉದ್ದಕ್ಕೂ ನೂರಾರು ವಾಹನಗಳು ಸರತಿ ಸಾಲಿನಲ್ಲಿ ಸುಮಾರು 2 ತಾಸು ನಿಂತಿದ್ದ ದೃಶ್ಯ ಕಂಡು ಬಂತು. ಇದರಿಂದಾಗಿ ದೂರದ ಊರುಗಳಿಂದ ಹೊರನಾಡು, ಶೃಂಗೇರಿ ದೇವಾಲಯಗಳಿಗೆ ಬಂದಿದ್ದ ಯಾತಿಗಳು ಪರದಾಡುವಂತಾಗಿತ್ತು. 2 ತಾಸಿನ ಬಳಿಕ ಮಳೆ ಕಡಿಮೆಯಾದ ಬಳಿಕ ನೀರು ಕಡಿಮೆಯಾದ್ದರಿಂದ ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾಯಿತೆಂದು ವರದಿಯಾಗಿದೆ.







