ಎಚ್‌ಡಿಕೆ ಪೂರ್ಣಾವಧಿ ಮುಖ್ಯಮಂತ್ರಿ: ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ?

ಬೆಂಗಳೂರು, ಜೂ.2: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿಯೇ ಐದು ವರ್ಷಗಳ ಕಾಲ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮಾಡಿರುವ ಘೋಷಣೆಯು, ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಕುಮಾರಸ್ವಾಮಿಯೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಒಪ್ಪಂದದಲ್ಲಿ ನಮೂದಿಸಿದ್ದು ಏಕೆ? ಅಲ್ಲದೆ, ಅದನ್ನು ಬಹಿರಂಗವಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸುವ ಅಗತ್ಯವೇನಿತ್ತು ಎಂದು ಹಿರಿಯ ಕಾಂಗ್ರೆಸ್ ನಾಯಕರು ವೇಣುಗೋಪಾಲ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಕುಮಾರಸ್ವಾಮಿಯನ್ನು ಪೂರ್ಣಾವಧಿಗೆ ಮುಂದುವರೆಸುವ ವಿಚಾರದ ಕುರಿತು ಇನ್ನೂ ಹೆಚ್ಚಿನ ಚರ್ಚೆಯ ಅಗತ್ಯವಿತ್ತು. ಸಮ್ಮಿಶ್ರ ಸರಕಾರದಲ್ಲಿ ಒಂದೇ ಪಕ್ಷದವರನ್ನು ಪೂರ್ಣಾವಧಿಗೆ ಮುಖ್ಯಮಂತ್ರಿಯನ್ನಾಗಿ ಮುಂದುವರೆಸುತ್ತಿರುವುದಾಗಿ ಒಪ್ಪಂದದಲ್ಲಿ ಪ್ರಕಟಿಸಿದ್ದು ಸರಿಯಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ವೀರಪ್ಪಮೊಯ್ಲಿ ಸೇರಿದಂತೆ ಇನ್ನಿತರರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
79 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷವು ಹಣಕಾಸು ಖಾತೆಯೊಂದಿಗೆ ಮುಖ್ಯಮಂತ್ರಿ ಸ್ಥಾನವನ್ನು ಐದು ವರ್ಷಗಳ ಕಾಲ ಬಿಟ್ಟು ಕೊಡಬೇಕೆ? ಈ ಪರಿಸ್ಥಿತಿ ಮುಂದುವರೆದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ತಳಮಟ್ಟದಿಂದ ಕಟ್ಟಲು ಹೇಗೆ ಸಾಧ್ಯ ಎಂದು ಹಿರಿಯ ನಾಯಕರು ತಮ್ಮ ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವಿಚಾರವು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಇಂದು ನಗರದಲ್ಲಿ ನಡೆದ ಕಾಂಗ್ರೆಸ್ ಮುಖಂಡರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳ ಆತ್ಮಾವಲೋಕನ ಸಭೆಯಲ್ಲೂ ಪ್ರತಿಧ್ವನಿಸಿದೆ.
ಕುಮಾರಸ್ವಾಮಿ ಐದು ವರ್ಷಗಳ ಮುಖ್ಯಮಂತ್ರಿಯಾಗಿ ಮುಂದುವರೆಸಲು ಹೈಕಮಾಂಡ್ ತೀರ್ಮಾನ ಮಾಡಿದೆ. ಅದಕ್ಕೆ ನಾವು ಬದ್ಧರಾಗಿರಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮುಂದುವರೆಯಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಮುಂದುವರೆಯಬೇಕಿದೆ ಎಂದು ಪರಮೇಶ್ವರ್ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.







