ಸಾಲಮನ್ನಾ ಆಗುವವರೆಗೂ ಹೋರಾಟ: ಶಾಸಕ ಬಿ.ಶ್ರೀರಾಮುಲು

ಕೊಪ್ಪಳ, ಜೂ. 2: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಒಂದು ತಿಂಗಳ ಒಳಗಾಗಿ ರೈತರ ಸಾಲಮನ್ನಾ ಮಾಡದಿದ್ದರೆ ವಿಧಾನಸಭೆ ಒಳಗೆ ಮತ್ತು ಹೊರಗೆ ಹೋರಾಟ ಮಾಡಲಾಗುವುದು ಎಂದು ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ. ಶ್ರೀರಾಮುಲು ಎಚ್ಚರಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಮುಂದುವರಿದಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೂಡಲೇ ರೈತರ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಸಿಎಂ ಕುಮಾರಸ್ವಾಮಿ ವಿಧಾನಸಭೆಯಲ್ಲಿ ರೈತರ ಸಭೆ ಕರೆದು ಭಾವನಾತ್ಮಕವಾಗಿ ಮಾತನಾಡುತ್ತಾರೆ. ಆದರೆ ಭಾವನಾತ್ಮಕ ಮಾತುಗಳಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದ ಶ್ರೀರಾಮುಲು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಬುದ್ಧಿ ಹೇಳುವಷ್ಟು ದೊಡ್ಡ ಮನುಷ್ಯ ಕುಮಾರಸ್ವಾಮಿ ಅಲ್ಲ. ಅವರು ಸಿಎಂ ಎಂಬ ಕಾರಣಕ್ಕೆ ಗೌರವದಿಂದಲೇ ಮಾತನಾಡುತ್ತಿದ್ದೇವೆ ಎಂದರು.
ಚುನಾವಣಾ ಸಂದರ್ಭದಲ್ಲಿ ಘೋಷಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದಲ್ಲಿನ ರೈತರ ಎಲ್ಲ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಸಾಲಮನ್ನಾ ಆಗುವವರೆಗೂ ಬಿಜೆಪಿ ರಾಜ್ಯದಲ್ಲಿ ರೈತರ ಪರವಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.





